ಸಾರಾಂಶ
ತಿರುಪತಿ: ದನ ಹಾಗೂ ಹಂದಿ ಕೊಬ್ಬು ಬಳಕೆಯ ವಿವಾದದಲ್ಲಿ ಸಿಲುಕಿರುವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯದ ಲಡ್ಡು ಪ್ರಸಾದದಲ್ಲಿ ಮಹಿಳೆಯೊಬ್ಬರು ತಮಗೆ ತಂಬಾಕು ಸಿಕ್ಕಿದೆ ಎಂದು ಹೊಸ ಆರೋಪ ಮಾಡಿದ್ದಾರೆ. ಆದರೆ, ಇದನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಅಲ್ಲಗಳೆದಿದೆ.
ಖಮ್ಮಂ ಜಿಲ್ಲೆಯ ದೊಂತು ಪದ್ಮಾವತಿ ಎಂಬ ಮಹಿಳೆ, ‘ನಾನು ಸೆ.19ರಂದು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದೆ. ಅಲ್ಲಿಂದ ಕೆಲ ಲಡ್ಡು ಪ್ರಸಾದಗಳನ್ನು ತಂದಿದ್ದೆ. ಅದನ್ನು ಮನೆಯವರಿಗೆ ಹಾಗೂ ಅಕ್ಕಪಕ್ಕದವರಿಗೆ ಹಂಚಲು ಹೋದಾಗ ಲಡ್ಡು ಒಳಗೆ ಸಣ್ಣ ಕಾಗದದಲ್ಲಿ ಸುತ್ತಿದ ಕೆಲ ತಂಬಾಕಿನ ತುಣುಕುಗಳು ಸಿಕ್ಕಿವೆ. ಪ್ರಸಾದ ಪವಿತ್ರವಾಗಿರಬೇಕು. ಆದರೆ ಹೀಗೆ ಕಲಬೆರಕೆ ಆಗಿರುವುದನ್ನು ನೋಡಿ ತುಂಬಾ ಬೇಸರವಾಯಿತು’ ಎಂದು ಹೇಳಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ, ‘ತಿರುಪತಿ ಲಡ್ಡುವಿನಲ್ಲಿ ತಂಬಾಕಿನ ಪ್ಯಾಕೆಟ್ ಸಿಕ್ಕಿದೆ ಎಂಬುದು ಸುಳ್ಳು ಆರೋಪ. ಲಡ್ಡುವನ್ನು ಶ್ರೀವೈಷ್ಣವ ಬ್ರಾಹ್ಮಣರು ದೇವಸ್ಥಾನದ ‘ಲಡ್ಡು ಪೋಟು’ನಲ್ಲಿ ಬಹಳ ಎಚ್ಚರಿಕೆಯಿಂದ ತಯಾರಿಸುತ್ತಾರೆ. ಅಲ್ಲಿ ಸಾಕಷ್ಟು ಭದ್ರತೆ, ಮುನ್ನೆಚ್ಚರಿಕೆ ಕ್ರಮ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಎಲ್ಲವೂ ಇರುತ್ತದೆ. ಅಲ್ಲಿ ಯಾರೂ ತಂಬಾಕು ಬಳಸುವುದಿಲ್ಲ’ ಎಂದು ಹೇಳಿದೆ.
ಇದೇ ವೇಳೆ, ಆರೋಪ ಮಾಡಿರುವ ಮಹಿಳೆಯನ್ನು ಸಂಪರ್ಕಿಸಿರುವ ಟಿಟಿಡಿ, ತನಿಖೆಗಾಗಿ ಲಡ್ಡುವನ್ನು ಮರಳಿಸಬೇಕೆಂದು ಮನವಿ ಮಾಡಿದೆ.==
ಲಡ್ಡು ವಿವಾದ ಎಫೆಕ್ಟ್: ಉ.ಪ್ರ.ದಲ್ಲಿ ಅಡುಗೆಭಟ್ಟರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯಲಖನೌ: ‘ಉತ್ತರ ಪ್ರದೇಶದಲ್ಲಿನ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಮತ್ತು ಸಪ್ಲೈಯರ್‌ಗಳು ಕೆಲಸದ ಅವಧಿಯಲ್ಲಿ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸಬೇಕು’ ಎಂದು ಯೋಗಿ ಆದಿತ್ಯನಾಥ ಸರ್ಕಾರ ಆದೇಶಿಸಿದೆ. ತಿರುಪತಿ ದೇವಸ್ಥಾನದ ಲಡ್ಡು ಕಲಬೆರಕೆ ವಿವಾದ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.ಹೊಸ ಸೂಚನೆಯಲ್ಲಿ, ‘ಹೋಟೆಲ್‌ಗಳಲ್ಲಿ ಬಾಣಸಿಗರು ಮತ್ತು ಸಪ್ಲೈಯರ್‌ಗಳು ಕೈಗೆ ಕಡ್ಡಾಯವಾಗಿ ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು ಹೋಟೆಲ್‌ನಲ್ಲಿ ಸಿಸಿಟೀವಿಗಳನ್ನು ಅಳವಡಿಸಬೇಕು. ಬಾಣಸಿಗರು ಮತ್ತು ಸಪ್ಲೈಯರ್‌ಗಳ ಜೊತೆಗೆ ನಿರ್ವಾಹಕರು, ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಹೆಸರುಗಳನ್ನು ಮತ್ತು ವಿಳಾಸಗಳನ್ನು ಹೋಟೆಲ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಸೂಚಿಸಿದೆ.==
ಸರ್ಕಾರ ಹಿಡಿತದಿಂದ ದೇಗುಲ ಮುಕ್ತಿಗೆ ವಿಎಚ್‌ಪಿ ಆಂದೋಲನನವದೆಹಲಿ: ‘ಅಲ್ಪಸಂಖ್ಯಾತರು ಧಾರ್ಮಿಕ ಸಂಸ್ಥೆಗಳನ್ನು ನಡೆಸಬಹುದು ಅಂತಾದರೆ ಹಿಂದೂಗಳೇಕೆ ನಡೆಸಬಾರದು? ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಈ ಬಗ್ಗೆ ಶೀಘ್ರದಲ್ಲೇ ದೇಶವ್ಯಾಪಿ ಆಂದೋಲನ ನಡೆಸುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ತಿರುಮಲ ಲಡ್ಡು ಪ್ರಸಾದದ ವಿವಾದ ಎದ್ದಿರುವ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್, ‘ದೇಶಾದ್ಯಂತ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು ನಮ್ಮ ಸಂಕಲ್ಪ. ಪ್ರತಿ ರಾಜ್ಯಗಳಲ್ಲಿಯೂ ಆಂದೋಲನ ನಡೆಸಿ ಮುಖ್ಯಮಂತ್ರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ. ಅಗತ್ಯವಿದ್ದಲ್ಲಿ ಕಾನೂನಿನ ಮೊರೆ ಹೋಗಲಾಗುವುದು. ದೇಗುಲಗಳನ್ನು ಸರ್ಕಾರ ನಿಯಂತ್ರಿಸುವುದು ಸಂವಿಧಾನದ ಉಲ್ಲಂಘನೆ’ ಎಂದರು.ಲಡ್ಡು ಪ್ರಸಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂಥ ವಿವಾದ ಶಬರಿಮಲೆ ಪ್ರಸಾದದ ಬಗ್ಗೆಯೂ ಎದ್ದಿತ್ತು ಎಂದರು.