ಭಕ್ತರ ಹಣ ಸತ್ಕಾರ್ಯಕ್ಕೆ ಬಳಸಿ, ಮದುವೆ ಹಾಲ್‌ಗೆ ಅಲ್ಲ: ಸುಪ್ರೀಂ

| Published : Sep 17 2025, 01:05 AM IST

ಭಕ್ತರ ಹಣ ಸತ್ಕಾರ್ಯಕ್ಕೆ ಬಳಸಿ, ಮದುವೆ ಹಾಲ್‌ಗೆ ಅಲ್ಲ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

‘ಭಕ್ತರು ದೇವರಿಗೆ ಹಾಕುವ ಕಾಣಿಕೆಯ ಹಣ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಂತಹ ಕಾರ್ಯಗಳಿಗೆ ವಿನಿಯೋಗವಾಗಬೇಕೇ ಹೊರತು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿನವದೆಹಲಿ: ‘ಭಕ್ತರು ದೇವರಿಗೆ ಹಾಕುವ ಕಾಣಿಕೆಯ ಹಣ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಂತಹ ಕಾರ್ಯಗಳಿಗೆ ವಿನಿಯೋಗವಾಗಬೇಕೇ ಹೊರತು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ದೇವಸ್ಥಾನಗಳಿಗೆ ಭಕ್ತರಿಂದ ಹರಿದುಬಂದ 80 ಕೋಟಿ ರು.ಗಳನ್ನು ಬಳಸಿ ರಾಜ್ಯದ 27 ದೇವಸ್ಥಾನಗಳಲ್ಲಿ ಮದುವೆ ಸಭಾಂಗಣಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ಕೊಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದನ್ನು ಆಕ್ಷೇಪಿಸಿ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಭಕ್ತರ ಕಾಣಿಕೆ ಹಣವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಆ.19ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ, ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿದ್ದು, ‘ಭಕ್ತರು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಾಗಿ ಕಾಣಿಕೆ ನೀಡಿರುವುದಿಲ್ಲ. ಅದನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಕೊಟ್ಟಿರಬಹುದು. ದೇವಸ್ಥಾನದ ಆವರಣದಲ್ಲಿ ಮದುವೆ ಪಾರ್ಟಿ ನಡೆಯುತ್ತಿದ್ದರೆ ಮತ್ತು ಅಶ್ಲೀಲ ಹಾಡುಗಳನ್ನು ಹಾಕಿದರೆ, ಅದು ದೇವಸ್ಥಾನದ ಉದ್ದೇಶವೇ? ಭಕ್ತರ ಹಣ ಶಿಕ್ಷಣ, ವೈದ್ಯಕೀಯದಂತಹ ಸತ್ಕಾರ್ಯಗಳಿಗೆ ಬಳಕೆಯಾಗಬೇಕು’ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ‘ನಾವು ಈ ಪ್ರಕರಣವನ್ನು ಆಲಿಸುತ್ತೇವೆ. ಆದರೆ ಅರ್ಜಿದಾರರಿಗೆ ಯಾವುದೇ ತಡೆಯಾಜ್ಞೆ ನೀಡುತ್ತಿಲ್ಲ’ ಎಂದಿದೆ.