ಸಾರಾಂಶ
ತಿರುಮಲ: ವಿಶ್ವದ ಅತ್ಯಂತ ಶ್ರೀಮಂತ ದೇಗುಲವಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಹಾರಾಷ್ಟ್ರ ಪುಣೆ ಮೂಲದ ಸ್ನೇಹಿತರ ಗುಂಪೊಂದು ಮೈತುಂಬಾ ಭರ್ಜರಿ 18 ಕೋಟಿ ರು.ಮೌಲ್ಯದ 25 ಕೆಜಿ ಚಿನ್ನ ಧರಿಸಿ ಬಂದು ಎಲ್ಲರ ಗಮನ ಸೆಳೆದಿದೆ.
ಪುಣೆ ಮೂಲದ ಉದ್ಯಮಿಗಳಾದ ಸನ್ನಿ ನಾನಾಸಾಬ್ ವಾಘಚೌರೆ ಮತ್ತು ಸಂಜಯ್ ದತ್ತಾತ್ರೇಯ ಗುಜ್ಜರ್ ತಲಾ 10 ಕೇಜಿ ಚಿನ್ನ ಹಾಗೂ ಅವರೊಂದಿಗೆ ಆಗಮಿಸಿದ್ದ ಪ್ರೀತಿ ಸೋನಿ 5 ಕೇಜಿ ಚಿನ್ನ ಧರಿಸಿ ಚಿನ್ನದ ಬಣ್ಣದ ಸೀರೆ ತೊಟ್ಟು ವಿವಿಧ ರೀತಿಯ ಚಿನ್ನದ ಸರಗಳು, ಚಿನ್ನದ ಸನ್‌ಗ್ಲಾಸ್, ನಕ್ಲೆಸ್‌ಗಳು ಹಾಗೂ ವಿವಿಧ ರೀತಿಯ ಆಭರಣ ಧರಿಸಿ ದೇವರ ದರ್ಶನ ಪಡೆದಿದ್ದಾರೆ.
ಚಿನ್ನ ಧರಿಸಿದ ಸನ್ನಿ ಕುಟುಂಬ ಇಡೀ ದೇಗುಲದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಜಾಲತಾಣದಲ್ಲೂ ಇವರ ವಿಡಿಯೋ ವೈರಲ್ ಆಗಿದೆ.
ಯಾರಿವರು?:
ಸನ್ನಿ ಮತ್ತು ಸಂಜಯ್ ಪುಣೆ ಮೂಲದ ಯುವಕರು. ಚಲನಚಿತ್ರಗಳಿಗೆ ಹಣಕಾಸಿನ ನೆರವು ಸೇರಿದಂತೆ ನಾನಾ ರೀತಿಯ ಉದ್ಯಮ ನಡೆಸುತ್ತಿದ್ಧಾರೆ. ಸದಾ ಮೈಮೇಲೆ 4-5 ಕೆಜಿ ಚಿನ್ನದ ಆಭರಣ ಧರಿಸುವುದು ಇವರ ಹವ್ಯಾಸ. ಜೊತೆಗೆ ಈ ಜೋಡಿ ಬಳಿ ಚಿನ್ನಲೇಪಿತ ಕಾರು, ಬೈಕ್, ಚಿನ್ನ, ವಜ್ರ ಒಳಗೊಂಡ ವಾಚ್, ಮೊಬೈಲ್, ಚಪ್ಪಲಿ, ವಸ್ತ್ರ ಕೂಡಾ ಇದೆ. ಇಬ್ಬರೂ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ನಟ, ಮಾಡೆಲ್ ಆಗಿಯೂ ಹೆಸರು ಮಾಡಿದ್ದಾರೆ. ಪ್ರೀತಿ ಸೋನಿ, ಸನ್ನಿಯ ಪ್ರಿಯತಮೆ ಎನ್ನಲಾಗಿದೆ.