ವಿಳಂಬದ ಕುರಿತು ನಿಖರ ಮಾಹಿತಿಗೆ ಡಿಜಿಸಿಎ ಸೂಚನೆ

| Published : Jan 16 2024, 01:50 AM IST / Updated: Jan 16 2024, 01:16 PM IST

ಸಾರಾಂಶ

ಪ್ರಯಾಣಿಕರಿಗೆ ವಿಮಾನದ ವಿಳಂಬ ಸಮಯದ ಕುರಿತು ನಿಖರ ಮಾಹಿತಿ ನೀಡುವಂತೆ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ತಾಕೀತು ಮಾಡಿದೆ.

ನವದೆಹಲಿ: ದಟ್ಟ ಮಂಜು ಮತ್ತು ಇತರ ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಮಾನ ವಿಳಂಬದ ಕುರಿತು ಪ್ರಯಾಣಿಕರಿಗೆ ನಿಖರ ಮಾಹಿತಿ ತಿಳಿಸಲು ವಿಮಾನ ಸಂಸ್ಥೆಗಳು ಸಿಬ್ಬಂದಿಗಳನ್ನು ನಿಯೋಜಿಸುವಂತೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ(ಡಿಜಿಸಿಎ) ಆದೇಶಿಸಿದೆ.

ಅನಿವಾರ್ಯ ಸಂದರ್ಭಗಳಲ್ಲಿ ವಿಮಾನಗಳನ್ನು ಮೂರು ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡುವುದಾದರೆ ಆ ಕುರಿತು ಪ್ರಯಾಣಿಕರಿಗೆ ನಿಖರ ಮಾಹಿತಿ ತಿಳಿಸಿ ಸೂಕ್ತ ಸಂವಹನ ನಡೆಸಲು ಗ್ರಾಹಕ ಸ್ನೇಹಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಡಿಜಿಸಿಎ ಮಾರ್ಗಸೂಚಿ ಹೊರಡಿಸಿದೆ. 

ದೆಹಲಿ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿ ವಿಮಾನ ವಿಳಂಬದ ಕುರಿತು ಸಮರ್ಪಕ ಮಾಹಿತಿ ನೀಡದೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.