ಸಾರಾಂಶ
ನವದೆಹಲಿ: ವಿಮಾನ ಸಿಬ್ಬಂದಿಯ ವಾರದ ವಿಶ್ರಾಂತಿ ಸಮಯವನ್ನು 48 ಗಂಟೆಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ವಿಮಾನ ಕಂಪನಿಗಳಿಗೆ ನಾಗರಿಕ ವಿಮಾನಯಾನ ಪ್ರಾಧಿಕಾರ (ಡಿಜಿಸಿಎ) ಮಾರ್ಗಸೂಚಿ ಹೊರಡಿಸಿದೆ.ವಿಮಾನಯಾನ ಸಿಬ್ಬಂದಿಯ ವಾರದ ವಿಶ್ರಾಂತಿ ಅವಧಿಯನ್ನು 36 ಗಂಟೆಯಿಂದ 48 ಗಂಟೆಗೆ ವಿಸ್ತರಿಸಬೇಕು.
ರಾತ್ರಿಯ ಅವಧಿಯನ್ನು ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 6ರವರೆಗೆ ವಿಸ್ತರಿಸಬೇಕು. ಆ ಅವಧಿಯಲ್ಲಿ ಕೇವಲ 2 ವಿಮಾನಗಳನ್ನು ಮಾತ್ರ ಕೆಳಗಿಳಿಸಬೇಕು. ಅಲ್ಲದೆ ರಾತ್ರಿ ವೇಳೆ ಸಂಚರಿಸುವ ವಿಮಾನದ ಸಿಬ್ಬಂದಿಯ ಸೇವಾವಧಿಯನ್ನು 8 ಗಂಟೆ ಹಾಗೂ ಒಟ್ಟು ಕಾರ್ಯಾವಧಿಯನ್ನು 10 ಗಂಟೆಗೆ ನಿಯಂತ್ರಿಸಬೇಕು ಎಂದು ಸೂಚಿಸಲಾಗಿದೆ.
ಈ ಎಲ್ಲ ಬದಲಾವಣೆಗಳನ್ನು ವಿಮಾನಯಾನ ಸಿಬ್ಬಂದಿಯ ಆಯಾಸ ಕಡಿಮೆ ಮಾಡುವ ಉದ್ದೇಶದಿಂದ ಮಾಡಲಾಗಿದ್ದು, ಮಧ್ಯರಾತ್ರಿ 2ರಿಂದ ಮುಂಜಾನೆ 6ರವರೆಗೆ ವೈಜ್ಞಾನಿಕವಾಗಿ ವ್ಯಕ್ತಿಯ ಜಾಗ್ರತೆ ಕಡಿಮೆಯಿರುವ ಕಾರಣ ಆ ಅವಧಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿರುವುದಾಗಿ ತಿಳಿಸಿದೆ.
ಅಲ್ಲದೆ ಈ ಎಲ್ಲ ನಿಯಮಗಳನ್ನು ಜೂ.1ರ ಒಳಗೆ ಜಾರಿಗೆ ತರಲು ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ.
ಏನೇನು ಬದಲಾವಣೆ?
1. ವಿಮಾನ ಸಿಬ್ಬಂದಿ ವಾರದ ವಿಶ್ರಾಂತಿ ಅವಧಿ 36ರಿಂದ 48 ಗಂಟೆಗೆ ಏರಿಕೆ
2. ರಾತ್ರಿಯ ಅವಧಿಯನ್ನು ಮಧ್ಯರಾತ್ರಿ 12ರಿಂದ 6 ಗಂಟೆವರೆಗೆ ವಿಸ್ತರಣೆ (ಮೊದಲು 12ರಿಂದ 5ರವರೆಗೆ ಇತ್ತು)
3. ರಾತ್ರಿಯ ಅವಧಿಯಲ್ಲಿ 2 ವಿಮಾನ ಲ್ಯಾಂಡಿಂಗ್‌ಗೆ ಅವಕಾಶ (ಮೊದಲು 6ಕ್ಕೆ ಅವಕಾಶ)4. ರಾತ್ರಿಪಾಳಿ ಪೈಲಟ್ ಗರಿಷ್ಠ ಸೇವಾವಧಿ 8 ಗಂಟೆ ಮತ್ತು ಕಾರ್ಯಾವಧಿ 10 ಗಂಟೆ.