ಸಾರಾಂಶ
- ಅನನ್ಯಾ ನನ್ನ ಮಗಳೆಂದಿದ್ದ ಸುಜಾತಾ
- ಬಯಲಾಗಿದ್ದ ಫೋಟೊ ವಸಂತಿಯದು?- ಧರ್ಮಸ್ಥಳದಲ್ಲಿನ ಪ್ರಕರಣಕ್ಕೆ ತಿರುವು
--- ಸುವರ್ಣ ನ್ಯೂಸ್ ಬಯಲಿಗೆ ತಂದ ಪ್ರಕರಣ
--- ಪುತ್ರಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆ ಆಗಿದ್ದಾಳೆ ಎಂದು ಸುಜಾತಾ ಭಟ್ ದೂರು
- ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೆ ಎಂದು ಮಾಸ್ಕ್ ಮ್ಯಾನ್ ಹೇಳಿದ ನಂತರ ದೂರು ಸಲ್ಲಿಕೆ- ಇತ್ತೀಚೆಗೆ ತನ್ನ ಮಗಳು ಅನನ್ಯಾಳದ್ದು ಎಂದು ಸುಜಾತಾ ಭಟ್ ರಿಂದ ಫೋಟೋ ಬಿಡುಗಡೆ
- ಆದರೆ ಫೋಟೋ ಅನನ್ಯಾಳದ್ದಲ್ಲ, ಮೃತಪಟ್ಟ ವಸಂತಿ ಎಂಬಾಕೆಯದು ಎಂದು ಬಯಲಿಗೆ- ಸುಜಾತಾ ಭಟ್ ನೀಡುತ್ತಿರುವ ಹೇಳಿಕೆಯ ಸತ್ಯಾಸತ್ಯತೆಯ ಪರಿಶೀಲನೆಗೆ ಎಸ್ಐಟಿ ಸಜ್ಜುಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣದ ನಡುವೆ, ‘ಧರ್ಮಸ್ಥಳದಲ್ಲಿ 2003ರಲ್ಲಿ ತನ್ನ ಪುತ್ರಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ’ ಎಂದು ಸುಜಾತಾ ಭಟ್ ಎಂಬಾಕೆ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸುಜಾತಾ ತೋರಿಸಿದ್ದ ಫೋಟೋ, ಅವರು ಒಡನಾಟದಲ್ಲಿದ್ದ ರಂಗಪ್ರಸಾದ್ ಎಂಬುವರ ಸೊಸೆ ವಸಂತಿ ಎಂಬಾಕೆಗೆ ಹೋಲಿಕೆಯಾಗುತ್ತಿದೆ. ಆಕೆಗೆ, ಮಕ್ಕಳೇ ಇಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಹೀಗಾಗಿ ಅನನ್ಯಾ ಭಟ್ ಕೇಸೇ ಬುರುಡೆ ಎಂದು ಗೊತ್ತಾಗಿದೆ.ಆದರೆ, ಈ ಬಗ್ಗೆ ಸುಜಾತ ಭಟ್ ಮಾತ್ರ ‘ವಸಂತಿ ಯಾರು ಎಂಬುದೇ ಗೊತ್ತಿಲ್ಲ. ಅದು ನನ್ನ ಪುತ್ರಿ ಅನನ್ಯಾ ಭಟ್ ಅವಳದ್ದೇ ಫೋಟೋ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕನ್ನಡಪ್ರಭ’ದ ಸಹೋದರಿ ಸಂಸ್ಥೆ, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟ ಉತ್ತರ ನೀಡಲಿಲ್ಲ. ‘ವಸಂತಿ ಅವರ ರೀತಿಯೇ ಅನನ್ಯಾ ಭಟ್ ಇದ್ದರೇ’ ಎಂಬ ಪ್ರಶ್ನೆಗೆ ಸುಜಾತ ಭಟ್ ಸಮರ್ಪಕ ಉತ್ತರ ನೀಡಲಿಲ್ಲ ನಮ್ಮ ಮನೆಯವರ ರೀತಿ ಅನನ್ಯಾ ಇದ್ದರು. ಒಂದೇ ರೀತಿ ಇರಲಿಲ್ಲ. ಸುಮ್ಮನೆ ಯಾಕೆ ನಮ್ಮ ತಲೆ ತಿಂತೀರಾ ಎಂದು ಮರುಪ್ರಶ್ನಿಸಿದ್ದಾರೆ.ಉಡುಪಿ ಮೆಡಿಕಲ್ ಕಾಲೇಜಿನಲ್ಲಿ ಅನನ್ಯಾ ಭಟ್ ಓದಿರುವ ದಾಖಲಾತಿ ಕುರಿತ ಪ್ರಶ್ನೆಗೂ ಸುಜಾತಾ ಭಟ್ ಸರಿಯಾಗಿ ಉತ್ತರಿಸಲಿಲ್ಲ. ಎಲ್ಲ ದಾಖಲೆಗಳನ್ನು ನಾಶ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅನನ್ಯಾ ಭಟ್ ಬರೆದಿದ್ದಾರೆ ಎನ್ನಲಾದ ಸಿಇಟಿ ಪರೀಕ್ಷೆಯ ದಾಖಲೆಯೂ ಸುಟ್ಟುಹೋಗಿದೆ ಎಂದಿದ್ದಾರೆ. ಈ ಮಧ್ಯೆ, ನಾನು ಎಲ್ಲಿ ದಾಖಲೆಗಳನ್ನು ಕೊಡಬೇಕೋ ಅಲ್ಲಿ ಕೊಡುತ್ತೇನೆ. ಎಲ್ಲರಿಗೆ ಕೊಡಲು ಆಗುವುದಿಲ್ಲ ಎಂದಿದ್ದಾರೆ.
ಕೋಲ್ಕತಾ ಸಿಬಿಐ ಕಚೇರಿಯಲ್ಲಿ ‘ಎಷ್ಟು ವರ್ಷ ಗುತ್ತಿಗೆ ಆಧಾರದಲ್ಲಿ ಸ್ಟೆನೋಗ್ರಾಫರ್ ಆಗಿದ್ದೀರಿ?’ ಎಂಬ ಪ್ರಶ್ನೆಗೂ ನೇರವಾಗಿ ಉತ್ತರಿಸದೆ, ನಿರ್ದಿಷ್ಟ ವರ್ಷ ಎಂದು ಎಲ್ಲಿಯೂ ಕೆಲಸ ಮಾಡಿಲ್ಲ, ಕರೆದಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಕೋಲ್ಕತ್ತಾದಲ್ಲಿ ಕಾಯಂ ಆಗಿ ಇರಲಿಲ್ಲ, ರಿಪ್ಪನ್‌ಪೇಟೆಗೂ ಬಂದು ಹೋಗುತ್ತಿದ್ದೆ. 2003ರಲ್ಲಿ ಅಲ್ಲಿ ಪ್ರಭಾಕರ ಬಾಳಿಗ ಎಂಬವರೊಂದಿಗೆ ಇದ್ದಿದ್ದೆ ಎಂದಿದ್ದಾರೆ ಸುಜಾತ ಭಟ್.ದೃಶ್ಯ ಮಾಧ್ಯಮಗಳಿಗೆ ಸುಜಾತ ಭಟ್ ಬಿಡುಡೆಗೊಳಿಸಿದ ಫೋಟೋ ಅನನ್ಯಾ ಭಟ್ ಅವರದ್ದಲ್ಲ, ಅದು ಕೆಲವು ವರ್ಷಗಳ ಹಿಂದೆ ಮೃತಪಟ್ಟ ವಸಂತಿ ಎಂಬಾಕೆಯದು. ಯುಟ್ಯೂಬರ್ ಸಮೀರ್ ಎಂಬಾತ ವಸಂತಿ ಎಂಬಾಕೆಯ ಹಣೆಗೆ ತಿಲಕ ಇರಿಸಿದ್ದಾನೆ, ಅದೇ ಫೋಟೋವನ್ನೇ ಅನನ್ಯಾ ಭಟ್‌ರ ಫೋಟೋ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬ ವಾದ ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಕೂಡ ಅನನ್ಯಾ ಭಟ್ ಎಂಬಾಕೆ ಇದ್ದಳೇ ಎಂಬ ಬಗ್ಗೆ ತನಿಖೆ ಕೈಗೊಂಡಿದೆ. ಸುಜಾತ ಭಟ್ ನೀಡುತ್ತಿರುವ ಹೇಳಿಕೆಯ ಸತ್ಯಾಸತ್ಯತೆಯ ಪರಿಶೀಲನೆಗೆ ಮುಂದಾಗಿದೆ.
ಈ ಮಧ್ಯೆ, ಸುಜಾತಾಳ ಅಕ್ಕನ ಪತಿ ಮಹಾಬಲೇಶ್ವರ್ ಕೂಡ ಮಾತನಾಡಿ, ಆಕೆ ನನ್ನ ನಾದಿನಿ, ಸುಜಾತಾಗೆ ಮಕ್ಕಳೇ ಇಲ್ಲ. ಆಕೆ ಬೇರೆ ಯಾರದ್ದೋ ಫೋಟೋ ಬಿಡುಗಡೆ ಮಾಡಿದ್ದಾರೆ. ಆಕೆ ಹೇಳುವುದೆಲ್ಲಾ ಸುಳ್ಳು ಎಂದಿದ್ದಾರೆ. ಸುಜಾತಾ ಭಟ್ ಹಿನ್ನೆಲೆಯೇನು?: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ಕೊಟ್ಟ ಒಂದೆರಡು ದಿನಗಳ ಅಂತರದಲ್ಲಿ ಸುಜಾತಾ ಭಟ್ ಎನ್ನುವ ಮಹಿಳೆ, ‘ನನ್ನ ಪುತ್ರಿ ಕೂಡ ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆ ಆಗಿದ್ದಾಳೆ. ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ಪುತ್ರಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಬಂದಾಗ ನಾಪತ್ತೆ ಆಗಿದ್ದಾಳೆ. ಇದೀಗ ನೂರಾರು ಮಹಿಳೆಯರ ಅಸ್ಥಿಪಂಜರ ಹುಡುಕಾಟದಲ್ಲಿ ಯುವತಿಯರ ಶವ ಸಿಕ್ಕಿದರೆ, ಅದನ್ನು ನನ್ನ ಡಿಎನ್‌ಎಗೆ ಹೋಲಿಕೆ ಮಾಡಿ ಮೂಳೆಗಳನ್ನಾದರೂ ಕೊಡಿ. ಸನಾತನ ಹಿಂದೂ ಧರ್ಮದ ಪ್ರಕಾರ ವಿಧಿವಿಧಾನ ನೆರವೇರಿಸಬೇಕು’ ಎಂದು ಎಸ್‌ಐಟಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಸುಳ್ಳು ದೂರು ಕೊಟ್ಟಿದ್ದಾರಾ?. ಪುತ್ರಿ ಅನನ್ಯಾ ಹುಟ್ಟಿದ್ದೇ ಸುಳ್ಳಾ ಎಂಬ ಅನುಮಾನಗಳ ಬಗ್ಗೆಯೂ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ.ದೂರುದಾರ ಸುಜಾತ ಭಟ್ ಅವರು, ಪುತ್ರಿಯ ನಾಪತ್ತೆ ದೂರು ದಾಖಲಿಸುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಗೃಹೋತ್ಪನ್ನ ವಸ್ತುಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.