ಸಾರಾಂಶ
ನವದೆಹಲಿ: 260 ಮಂದಿ ಸಾವಿಗೆ ಕಾರಣವಾದ ಅಹಮದಾಬಾದ್ ಏರ್‌ಇಂಡಿಯಾ ವಿಮಾನ ದುರಂತಕ್ಕೆ ವಿಮಾನದ ಎಲೆಕ್ಟ್ರಿಕಲ್ ಮತ್ತು ಸಾಫ್ಟ್‌ವೇರ್ ವಿಭಾಗದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಕಾರಣವಾಯಿತೇ? ಇಂಥದ್ದೊಂದು ಪ್ರಶ್ನೆ ಇದೀಗ ತನಿಖಾಧಿಕಾರಿಗಳನ್ನೂ ಕಾಡುತ್ತಿದ್ದು, ಈ ಕುರಿತ ಪರಿಶೀಲನೆ ಮುಂದುವರಿದಿದೆ.
ಸದ್ಯ ವಿಮಾನದ ಇಂಧನದ ಸ್ವಿಚ್ ಆಫ್ ಆಗಿದ್ದರ ಸುತ್ತವೇ ತನಿಖೆ ಕೇಂದ್ರೀಕೃತವಾಗಿದೆ. ಹೀಗಾಗಿ ಎಲೆಕ್ಟ್ರಿಕಲ್ ಮತ್ತು ಸಾಫ್ಟ್‌ವೇರ್ ವಿಭಾಗದಲ್ಲಿ ಕಾಣಿಸಿಕೊಂಡ ಸಮಸ್ಯೆಯು ಪೈಲಟ್ ಕಂಟ್ರೋಲ್ ವ್ಯವಸ್ಥೆಗೆ ಇಂಧನದ ಸ್ವಿಚ್ ಆಫ್ ಆಗಿದೆ ಎಂಬ ತಪ್ಪು ಸಂದೇಶ ಕಳುಹಿಸಿ ಎಡವಟ್ಟು ಸೃಷ್ಟಿಸಿತೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಈ ವಿಮಾನ ದೆಹಲಿಯಿಂದ ಅಹಮದಾಬಾದ್‌ಗೆ ಬಂದಾಗಲೇ ಸ್ಟೆಬಿಲೈಸರ್ ಪೊಸಿಷನ್ ಟ್ರಾನ್ಸ್ಯುಡ್ಸರ್ ಡಿಫೆಕ್ಟ್ ಗಮನಕ್ಕೆ ಬಂದಿತ್ತು. ಈ ಕುರಿತು ಪೈಲಟ್ ನೀಡಿದ ದೂರಿನಂತೆ ಅದನ್ನು ರಿಪೇರಿ ಕೂಡ ಮಾಡಲಾಗಿತ್ತು ಎಂದು ಹೇಳಲಾಗಿದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಏನಿದು ಸ್ಟೆಬಿಲೈಸರ್ ಪೊಸಿಷನ್ ಟ್ರಾನ್ಸ್ಯುಡ್ಸರ್?:
ಇದು ಮೂಲತಃ ಒಂದು ಸೆನ್ಸರ್ ಆಗಿದ್ದು, ವಿಮಾನದ ಪಿಚ್(ವಿಮಾನದ ಮೂತಿಯನ್ನು ಮೇಲೆ ಕೆಳಗೆ ಮಾಡುವ ಪ್ರಕ್ರಿಯೆ)ನ ದಿಕ್ಕನ್ನು ನಿಯಂತ್ರಿಸುವ ಮತ್ತು ಹಾರಾಟ ನಿಯಂತ್ರಣ ವ್ಯವಸ್ಥೆಗೆ ಎಲೆಕ್ಟ್ರಿಕ್ ಸಂಕೇತಗಳ ರೂಪದಲ್ಲಿ ಡೇಟಾ ರವಾನಿಸುವ ಕೆಲಸ ಮಾಡುತ್ತದೆ. ಈ ಮೂಲಕ ಪೈಲಟ್‌ಗೆ ಇನ್‌ಪುಟ್ ನೀಡುವ ಪ್ರತಿಕ್ರಿಯೆ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ದುರಂತಕ್ಕೀಡಾದ ವಿಮಾನ ಲಂಡನ್‌ಗೆ ಹಾರುವ ಮೊದಲು ಕಾಣಿಸಿಕೊಂಡಿದ್ದ ಸ್ಟೆಬಿಲೈಸರ್ ಪೊಸಿಷನ್ ಟ್ರಾನ್ಸ್ಯುಡ್ಸರ್ ಡಿಫೆಕ್ಟ್ ಅನ್ನು ಬೋಯಿಂಗ್‌ನ ಪ್ರೊಸೀಜರ್ ಪ್ರಕಾರ ಎಂಜಿನಿಯರ್‌ಗಳು ಸರಿಪಡಿಸಿದ್ದರು.
ಈ ಸಮಸ್ಯೆಗಳು ಯಾಕೆ ಗಂಭೀರವೆಂದರೆ, ಇವು ದಿಢೀರ್ ಆಗಿ ಇಂಧನ ಸ್ವಿಚ್ ಬಂದ್ ಆಗಿದೆ ಎಂಬ ಸಿಗ್ನಲ್ ಸೇರಿ ಫ್ಲೈಟ್ ಕಂಟ್ರೋಲ್ ವ್ಯವಸ್ಥೆಗೆ ಹಲವು ತಪ್ಪು ಸಂದೇಶಗಳನ್ನು ರವಾನಿಸುವ ಸಾಧ್ಯತೆಗಳಿರುತ್ತವೆ. ಆದರೆ, ವಿಮಾನ ದುರಂತಕ್ಕೆ ಇದೊಂದೇ ಸಮಸ್ಯೆ ಮೂಲ ಕಾರಣವಾಗಿರಲಿಕ್ಕಿಲ್ಲ. ಈ ಸಮಸ್ಯೆ ಹಲವು ಸೆನ್ಸರ್‌ಗಳ ವೈಫಲ್ಯಕ್ಕೆ ಕಾರಣವಾಗಿ ಕೊನೆಗೆ ಮಹಾದುರಂತಕ್ಕೆ ಮುನ್ನುಡಿ ಬರೆದಿರುವ ಸಾಧ್ಯತೆಯೂ ಇಲ್ಲದಿಲ್ಲ. ಈ ಕುರಿತು ಕೂಲಂಕಶ ತನಿಖೆ ನಡೆಯುತ್ತಿದೆ.