ಸಾರಾಂಶ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಯಾವ ರೀತಿ ಮಾಡಬೇಕು, ಯಾವ ಕಾಲಮಿತಿಯಲ್ಲಿ ನಡೆಸಬೇಕು ಎಂಬುದು ಚುನಾವಣಾ ಆಯೋಗದ ವಿಶೇಷಾಧಿಕಾರ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ದೇಶಾದ್ಯಂತ ನಿಯಮಿತವಾಗಿ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡುವುದು ಆಯೋಗದ ವಿಶೇಷಾಧಿಕಾರದಲ್ಲಿ ಮಧ್ಯಪ್ರವೇಶಿಸಿದಂತೆ - ಹೀಗೆಂದು ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆ ವೇಳೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆಕ್ಷೇಪ ಸಲ್ಲಿಸಿದೆ.
- ಹೇಗೆ, ಯಾವಾಗ ಎಂಬುದು ನಾವು ನಿರ್ಧರಿಸ್ತೇವೆ
- ಈ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶ ಸರಿಯಲ್ಲ- ಸುಪ್ರೀಂ ಕೋರ್ಟ್‌ಗೆ ಆಯೋಗದಿಂದ ಅಫಿಡವಿಟ್
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಯಾವ ರೀತಿ ಮಾಡಬೇಕು, ಯಾವ ಕಾಲಮಿತಿಯಲ್ಲಿ ನಡೆಸಬೇಕು ಎಂಬುದು ಚುನಾವಣಾ ಆಯೋಗದ ವಿಶೇಷಾಧಿಕಾರ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ದೇಶಾದ್ಯಂತ ನಿಯಮಿತವಾಗಿ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡುವುದು ಆಯೋಗದ ವಿಶೇಷಾಧಿಕಾರದಲ್ಲಿ ಮಧ್ಯಪ್ರವೇಶಿಸಿದಂತೆ - ಹೀಗೆಂದು ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆ ವೇಳೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆಕ್ಷೇಪ ಸಲ್ಲಿಸಿದೆ.ದೇಶಾದ್ಯಂತ ನಿಯಮಿತವಾಗಿ ಅದರಲ್ಲೂ ಮುಖ್ಯವಾಗಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡುವಂತೆ ಹಿರಿಯ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಕೋರಿದ ಹಿನ್ನೆಲೆಯಲ್ಲಿ ಆಯೋಗ ಈ ಅಫಿಡವಿಟ್ ಸಲ್ಲಿಸಿದೆ.
‘ಜು.5, 2025ರಲ್ಲಿ ಬರೆದ ಪತ್ರದಲ್ಲಿ ಬಿಹಾರ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ತುರ್ತು ಪೂರ್ವ ತಯಾರಿಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಜ.1, 2026 ಅನ್ನು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಅರ್ಹತಾ ದಿನವನ್ನಾಗಿ ನಿಗದಿಪಡಿಸಲಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಅಧಿಕಾರಿಗಳ ಜತೆಗೆ ಸೆ.10ರಂದು ಸಭೆಯನ್ನೂ ನಡೆಸಲಾಗಿದೆ’ ಎಂದು ತಿಳಿಸಿದೆ.‘ಮತದಾರರ ಪಟ್ಟಿ ಪರಿಷ್ಕರಣೆ ಸಿದ್ಧತೆಯ ಮೇಲುಸ್ತುವಾರಿ ವಹಿಸುವ ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರಗಳು ಚುನಾವಣಾ ಆಯೋಗಕ್ಕಿದೆ. ದೇಶಾದ್ಯಂತ ನಿಯಮಿತವಾಗಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುವಂತೆ ನೀಡುವ ಯಾವುದೇ ನಿರ್ದೇಶನವು ಚುನಾವಣಾ ಆಯೋಗದ ಅಧಿಕಾರವ್ಯಾಪ್ತಿಗೆ ಮಧ್ಯಪ್ರವೇಶ ಮಾಡಿದಂತೆ’ ಎಂದು ಅಫಿಡವಿಟ್‌ನಲ್ಲಿ ಆಯೋಗ ತಿಳಿಸಿದೆ.
‘ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಬೇಕೇ ಅಥವಾ ಸಂಕ್ಷಿಪ್ತವಾಗಿ ಪರಿಷ್ಕರಿಸಬೇಕೇ ಎಂಬುದನ್ನು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವ ಅಧಿಕಾರವನ್ನು ಜನಪ್ರತಿನಿಧಿಗಳ ಕಾಯ್ದೆ-1950 ಮತ್ತು ಮತದಾರರ ಪಟ್ಟಿಯ ನೋಂದಣಿ ಕಾಯ್ದೆ-1960ರ ಅಡಿ ಚುನಾವಣಾ ಆಯೋಗಕ್ಕೆ ನೀಡಲಾಗಿದೆ’ ಎಂದು ಅಫಿಡವಿಟ್‌ನಲ್ಲಿ ಆಯೋಗ ತಿಳಿಸಿದೆ.