ಸಾರಾಂಶ
- 8 ಸಾವಿರ ಕೋಟಿ ರು. ವೆಚ್ಚದ ಮಹತ್ವದ ಯೋಜನೆ
- ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಮೋದಿ ಚಾಲನೆ- 51.38 ಕಿ.ಮೀ. ಉದ್ದದ ಅತ್ಯಂತ ಸಂಕೀರ್ಣ ರೈಲು ಮಾರ್ಗ
- ಈ ರೈಲು ಮಾರ್ಗದಲ್ಲಿದೆ 45 ಸುರಂಗ, 142 ಸೇತುವೆಗಳುಐಜ್ವಾಲ್: ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂ ಅನ್ನು ಸಂಪರ್ಕಿಸುವ ಮೊದಲ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಬೈರಾಬಿ-ಸೈರಾಂಗ್ ನಡುವಿನ ಈ ರೈಲು ಮಾರ್ಗದಿಂದಾಗಿ ಮಿಜೋರಾಂಗೆ ಇನ್ನು ಭಾರತದ ಇತರೆ ಭಾಗಗಳನ್ನು ಸಂಪರ್ಕಿಸುವುದು ಸುಲಭವಾಗಲಿದೆ.
ಒಟ್ಟು 51.38 ಕಿ.ಮೀ. ಉದ್ದದ ಈ ರೈಲು ಯೋಜನೆ ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಯೋಜನೆಗಳಲ್ಲೊಂದು. 8 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿತ ಈ ಮಹತ್ವದ ರೈಲು ಮಾರ್ಗಕ್ಕೆ ಮೋದಿ ಅವರು ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಚಾಲನೆ ನೀಡಿದರು.ಎಂಜಿನಿಯರಿಂಗ್ ವಿಸ್ಮಯ ಎಂದೇ ಕರೆಯಲ್ಪಡುವ, ಅಪಾಯಕಾರಿ ಗುಡ್ಡಗಾಡು ಪ್ರದೇಶಗಳಲ್ಲಿ ಹಾದು ಹೋಗುವ ಈ ರೈಲು ಮಾರ್ಗಕ್ಕಾಗಿ 45 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈರಾಬಿ ಮತ್ತು ಸೈರಾಂಗ್ ರೈಲ್ವೆ ಯೋಜನೆಯು ಕೇಂದ್ರ ಸರ್ಕಾರದ ‘ಆ್ಯಕ್ಟ್ ಈಸ್ಟ್’ ನೀತಿಯ ಭಾಗವಾಗಿದೆ. ಇದು ಈಶಾನ್ಯ ಭಾರತಕ್ಕೆ ಸಂಪರ್ಕ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.11 ವರ್ಷಗಳ ಹಿಂದಿನ ಯೋಜನೆ:
ಬೈರಾಬಿ-ಸೈರಾಂಗ್ ರೈಲ್ವೆ ಮಾರ್ಗವು ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ಕ್ಲಿಷ್ಟಕರ ಯೋಜನೆಯಾಗಿದೆ.2008-09ರಲ್ಲಿ ಈ ರೈಲ್ವೆ ಮಾರ್ಗಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು. 2014ರ ನ.29ರಂದು ಪ್ರಧಾನಿ ಮೋದಿ ಅವರು ಯೋಜನೆಗೆ ಚಾಲನೆ ನೀಡಿದ್ದರು. ಆ ಬಳಿಕ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ 2015ರಲ್ಲಿ ಆರಂಭವಾಗಿತ್ತು. ಈ ರೈಲ್ವೆ ಮಾರ್ಗವು 45 ಸುರಂಗಗಳು, 55 ಪ್ರಮುಖ ಸೇತುವೆಗಳು ಮತ್ತು 87 ಕಿರು ಸೇತುವೆಗಳನ್ನು ಒಳಗೊಂಡಿದೆ. ಮಾಮೂಲಿಯಾಗಿ ಬೈರಾಬಿ-ಸೈರಾಂಗ್ ನಡುವೆ ರಸ್ತೆ ಮಾರ್ಗದಲ್ಲಿ ಸಂಚರಿಸಿದರೆ ಏಳು ಗಂಟೆ ತಗುಲುತ್ತಿತ್ತು. ರೈಲಿನ ಮೂಲಕ 3 ಗಂಟೆಯಲ್ಲೇ ಪ್ರಯಾಣಿಸಬಹುದಾಗಿದೆ.
ಕುತುಬ್ ಮಿನಾರ್‌ಗಿಂತಲೂ ಎತ್ತರದ ಸೇತುವೆಸೈರಾಂಗ್ ಸಮೀಪದ 144ನೇ ಸಂಖ್ಯೆಯ ಸೇತುವೆ ಕುತುಬ್ ಮಿನಾರ್‌ಗಿಂತಲೂ ಎತ್ತರದಲ್ಲಿದೆ. ಇದರ ಎತ್ತರ 114 ಮೀಟರ್. ಕಂಬದ ಮೇಲೆ ನಿರ್ಮಿತ ದೇಶದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಇದಾಗಿದೆ. ಸೈರಾಂಗ್ ಮತ್ತು ಬೈರಾಬಿ ಸೇರಿ ಈ ಮಾರ್ಗದಲ್ಲಿ ಒಟ್ಟು 4 ಮುಖ್ಯ ನಿಲ್ದಾಣಗಳಿರಲಿವೆ. ಮಿಜೋರಾಂನಿಂದ ದೇಶದ ಇತರೆ ಭಾಗಗಳಿಗೆ ನೇರ ರೈಲು ಸಂಪರ್ಕದಿಂದಾಗಿ ಈ ಭಾಗದ ಜನರ ಉತ್ಪನ್ನಗಳನ್ನು ತ್ವರಿತವಾಗಿ ಬೇರೆಡೆ ಸಾಗಿಸಲು ಅನುಕೂಲವಾಗಲಿದೆ.
ಗಡಿ ರಕ್ಷಣೆಗೂ ಈ ಯೋಜನೆ ಮಹತ್ವದ್ದುಮಿಜೋರಾಂ ರಾಜ್ಯವು ಬಾಂಗ್ಲಾ ಹಾಗೂ ಮ್ಯಾನ್ಮಾರ್ ಜತೆಗೆ ಗಡಿ ಹಂಚಿಕೊಂಡಿದೆ. ದುರ್ಗಮ ಬೆಟ್ಟಗುಡ್ಡಗಳು, ಕಾಡುಗಳಿಂದ ಆವೃತವಾಗಿದ್ದ ಈ ರಾಜ್ಯಕ್ಕೆ ರೈಲು ಸಂಪರ್ಕ ಸವಾಲಿನ ಕೆಲಸವಾಗಿತ್ತು. ಆದರೆ, ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಪ್ರಯತ್ನದ ಫಲವಾಗಿ ಆ ಕೆಲಸ ಇದೀಗ ಸಾಕಾರವಾಗಿದೆ. ಈ ರೈಲು ಮಾರ್ಗದಿಂದಾಗಿ ಗಡಿಭಾಗಕ್ಕೆ ಸೇನೆಯ ತುರ್ತು ರವಾನೆಗೂ ಅನುಕೂಲವಾಗಲಿದೆ.