ಸಾರಾಂಶ
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಯೋಜನೆ ಪ್ರಾರಂಭವಾಗಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಹಾವೇರಿ: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಯೋಜನೆ ಪ್ರಾರಂಭವಾಗಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದ ಹುತಾತ್ಮ ಮೈಲಾರ ಮಹದೇವಪ್ಪ ರೈಲು ನಿಲ್ದಾಣದಲ್ಲಿ ಶುಕ್ರವಾರ ವಂದೇ ಭಾರತ್ ಎಕ್ಸಪ್ರೆಸ್ ರೈಲು ಗಾಡಿಗೆ ಹೆಚ್ಚುವರಿ ನಿಲುಗಡೆ ಸೌಲಭ್ಯದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
2025ರ ಅಂತ್ಯದೊಳಗೆ ದೇಶದಲ್ಲಿ ನೂರಕ್ಕೆ ನೂರರಷ್ಟು ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಅಪಘಾತ ತಡೆಗೆ ಸ್ವದೇಶಿ ನಿರ್ಮಿತ ಕವಚ ವ್ಯವಸ್ಥೆ ಅಳವಡಿಕೆ ಆರಂಭಿಸಲಾಗಿದೆ. ರಾಣಿಬೆನ್ನೂರು- ಶಿವಮೊಗ್ಗ- ಶಿಕಾರಿಪುರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿದರೆ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ರೈಲ್ವೆ ಮಂಡಳಿ ಈ ದೇಶದ ಅಭಿವೃದ್ಧಿಯ ಎಂಜಿನ್ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ರೈಲು ಇಲಾಖೆ ಅಭ್ಯುದಯದ ದಿಕ್ಸೂಚಿಯಾಗಿದೆ. ರೈಲ್ವೆ ಬಜೆಟ್‌ನ್ನು ಒಗ್ಗೂಡಿಸದೇ ಇರದಿದ್ದರೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಾವಿರಾರು ಕೋಟಿ ರು. ಅನುದಾನ ನೀಡುವ ಮೂಲಕ ಮೂಲೆ ಮೂಲೆಯಲ್ಲಿರುವ ರೈಲು ನಿಲ್ದಾಣಗಳು ಅಭಿವೃದ್ಧಿಯಾಗುತ್ತಿವೆ. ಭಾರತ ಅಭಿವೃದ್ಧಿಯತ್ತ ದಾಫುಗಾಲು ಹಾಕುತ್ತಿದೆ. ದೇಶದ ಅಭಿವೃದ್ಧಿ ಜತೆಗೆ ಕರ್ನಾಟಕವು ಸೇರಬೇಕು ಎಂಬುದು ಮೋದಿ ಆಶಯವಾಗಿದೆ. ಜಿಲ್ಲೆಯ ಎಂಟು ತಾಲೂಕುಗಳಲ್ಲಿರುವ ಎಲ್ಲ ಆರ್‌ಯುಬಿ (ರೋಡ್ ಅಂಡರ್ ಬ್ರಿಡ್ಜ್)ಗಳನ್ನು ಆರ್‌ಒಬಿ (ರೋಡ್ ಒವರ್ ಬ್ರಿಡ್ಜ್)ಗಳನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇಶದಲ್ಲಿ 104 ಸ್ಥಳಗಳಿಂದ ವಂದೇ ಭಾರತ ರೈಲು ಓಡಾಡುತ್ತಿದ್ದು, ಈ ಪೈಕಿ ರಾಜ್ಯದಲ್ಲೇ ನಾಲ್ಕು ಸ್ಥಳಗಳಿಂದ ಓಡಾಡುತ್ತಿವೆ. ಶೀಘ್ರದಲ್ಲೇ ರಾಜ್ಯದ ಇನ್ನೂ ಎರಡು ಜಿಲ್ಲೆಗಳಿಂದ ವಂದೇ ಭಾರತ ರೈಲು ಓಡಾಟಕ್ಕೆ ಚಾಲನೆ ನೀಡಲಾಗುವುದು. ಹಾವೇರಿ ಲೋಕಸಭಾ ವ್ಯಾಪ್ತಿಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಸಂಸದ ಬಸವರಾಜ ಬೊಮ್ಮಾಯಿ ಅವರು ಸಲ್ಲಿಸಿದ ಪ್ರಮುಖ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಹಾವೇರಿ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರಿಗೆ, ವಯೋವೃದ್ಧರಿಗೆ ಪ್ಲಾಟ್‌ಫಾರಂಗಳಲ್ಲಿ ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಎರಡೂ ಕಡೆ ಎಸ್ಕಲೇಟರ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ. ವಿವಿಧ ಬಗೆಯ ಮೂರು ರೈಲುಗಳಿಗೆ ಹಾವೇರಿಯಲ್ಲಿ ನಿಲುಗಡೆ ಕಲ್ಪಿಸುವಂತೆ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದ ಅವರು, ರಾಣಿಬೆನ್ನೂರು ರೈಲು ನಿಲ್ದಾಣದಲ್ಲಿ ಗೂಡ್ಸ್ ಶೆಡ್ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸ್ಥಳದಲ್ಲೇ ಸೂಚನೆ ನೀಡಿದರು. ಬ್ಯಾಡಗಿ ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ನೈಋತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಮಹೇಂದ್ರ ಸಿಂಘಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ರೈಲ್ವೆ ಇಲಾಖೆಯ ಡಿಆರ್‌ಎಂ ಅನೂಪ್ ಹಾಗೂ ದಯಾನಂದ ಇತರರಿದ್ದರು.
ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳ: ಬೊಮ್ಮಾಯಿ
ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲ್ಲುವುದು ಶುಭ ಸೂಚನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದು, ಕಳೆದ ಹತ್ತು ವರ್ಷದಲ್ಲಿ ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದರು.
ರೈಲ್ವೆ ಇಲಾಖೆ ಲಾಭದ ಹಳಿಗೆ ಬಂದಿದೆ. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸಬೇಕೆಂಬ ಬೇಡಿಕೆ ಇತ್ತು. ನಿತ್ಯ ನೂರಾರು ಜನ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ರೈಲ್ವೆ ಇಲಾಖೆ ಸಂಪುಟ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆ ಮಾಡಬೇಕೆಂದು ಕೇಳಿದೆ. ಅವರು ಮಾಡುವುದಾಗಿ ಹೇಳಿದರು. ಅದರಂತೆ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗುತ್ತಿದೆ ಎಂದರು.ಶಿಕಾರಿಪುರ, ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗ ಬರುತ್ತಿದೆ. ಶಿವಮೊಗ್ಗದಿಂದ ಶಿಕಾರಿಪುರದ ವರೆಗೆ ಅಭಿವೃದ್ಧಿ ಆಗುತ್ತಿದೆ. ಈ ಕಡೆ ಆಗುತ್ತಿಲ್ಲ. ಅದಷ್ಟು ಬೇಗ ಭೂಸ್ವಾಧೀನ ಮಾಡಬೇಕು. ಒಂದು ತಿಂಗಳಲ್ಲಿ ಭೂಸ್ವಾಧೀನ ಕಾರ್ಯ ಮಾಡಿಸಿಕೊಡುತ್ತೇವೆ. ಶೇ. 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಕೆಲಸ ಪ್ರಾರಂಭಿಸಿ. ಯಲವಿಗಿ- ಗದಗ ಮಾರ್ಗಕ್ಕೆ ₹690 ಕೋಟಿ ಮಂಜೂರಾಗಿದೆ. ₹280 ಕೋಟಿ ಬಿಡುಗಡೆಯಾಗಿದೆ. ಮೇ ತಿಂಗಳಿನಲ್ಲಿ ಎರಡೂ ಯೋಜನೆಗೆ ಅನುಮೋದನೆ ನೀಡಿ ಕೆಲಸ ಆರಂಭಿಸಬೇಕು ಎಂದು ಮನವಿ ಮಾಡಿದರು.
ವಂದೇ ಭಾರತ್ ರೈಲಿನಲ್ಲಿ ಸಚಿವರ ಪ್ರಯಾಣ...ಹಾವೇರಿ ರೈಲು ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ ರೈಲು ಗಾಡಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸುವ ಮೂಲಕ ನಿಲುಗಡೆಗೆ ಚಾಲನೆ ನೀಡಿದರು. ಬಳಿಕ ಅದೇ ರೈಲಿನಲ್ಲಿ ಇಬ್ಬರೂ ಜತೆಗೂಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.