ದ್ವಿ ರಾಜ್ಯಗಳ ಸಾಮರಸ್ಯದಿಂದ ಮೇಕೆದಾಟು ಜಾರಿ : ಸಚಿವ ವಿ.ಸೋಮಣ್ಣ

| N/A | Published : Apr 08 2025, 12:33 AM IST / Updated: Apr 08 2025, 01:12 PM IST

ಸಾರಾಂಶ

ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಭಯ್ಯಮ್ಮ ದೇವಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿದರು.

 ಹನೂರು : ಎರಡು ರಾಜ್ಯಗಳ ಸಾಮರಸ್ಯದಿಂದ ಮೇಕೆದಾಟು ಯೋಜನೆ ಜಾರಿಯಾಗಲಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಮಾಪುರ ಗ್ರಾಮದಲ್ಲಿ ಭಯ್ಯಮ್ಮ ದೇವಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೇಕೆದಾಟು ಯೋಜನೆಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಲಭ್ಯವಿರುವ ನೀರಿನ ಹಕ್ಕುಗಳನ್ನು ಸಮತೋಲನವಾಗಿ ಹಂಚಿಕೊಳ್ಳುವ ಮಹತ್ವಪೂರ್ಣ ಯೋಜನೆಯಾಗಿದೆ. ಈ ಯೋಜನೆಗಾಗಿ ಕೆಲವು ಸಮಸ್ಯೆ ಉಂಟಾಗಿರುವುದರಿಂದ ಎರಡು ರಾಜ್ಯಗಳ ಸಹಕಾರ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ, ರಾಜ್ಯಗಳ ಹಿತ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಎರಡು ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ನೀರಿನ ಹಕ್ಕುಗಳನ್ನು ಸಮಾನವಾಗಿ ಹಂಚಿಕೊಳ್ಳುವ ಮೂಲಕ ಎರಡು ರಾಜ್ಯಗಳ ಮಧ್ಯೆ ಸಮತೋಲನ ಸಾಧಿಸಿ ಇಬ್ಬರಿಗೂ ಅನ್ಯಾಯವಾಗದಂತೆ ಸಾಮರಸ್ಯ ಮತ್ತು ಸಹಕಾರದ ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಂಡರೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ನಮ್ಮ ಇಲಾಖೆಯ ವತಿಯಿಂದ ಸಮಿತಿ ಕಳುಹಿಸುವೆ. ಎಲ್ಲೆಲ್ಲಿ ಬಯಲು ಪ್ರದೇಶವಿದೆ ಆ ಭಾಗದಲ್ಲಿ ಸರ್ವೆ ಮಾಡಿಸಿ ನಂತರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವೆ ಎಂದು ಭರವಸೆ ನೀಡಿದರು.

ನಾನು ಈ ಹಿಂದೆ ರಾಜ್ಯದಲ್ಲಿ ಸಚಿವನಾಗಿದ್ದಾಗ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ, ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಂಡಾಗ ಸಾಕಷ್ಟು ಜನರು ನನ್ನನ್ನು ಲೇವಡಿ ಮಾಡಿದರು. ಆದರೆ ಪ್ರಸ್ತುತ ನನ್ನ ಶ್ರಮದಿಂದ ನೂರಾರು ಕೆರೆಗಳಿಗೆ ನೀರು ತುಂಬಿಸಿರುವ ತೃಪ್ತಿ ನನಗಿದೆ. ಜಿಲ್ಲೆಯ ಜನತೆ ಮುಗ್ಧರು ಆದರೆ ಕೆಲವು ನಾಯಕರುಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಸುಳ್ಳನ್ನೇ ಮನೆ ಮಾಡಿಕೊಂಡಿದ್ದಾರೆ ಎಂದು ಯಾರ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.

ಪೂರ್ವಜರ ಇತಿಹಾಸ, ಸಂಸ್ಕಾರದಿಂದ ಭಾರತ ದೇಶದಲ್ಲಿ ಭಗವಂತನ ಪೂಜೆ ಮಾಡುವ ಅವಕಾಶ ಸಿಕ್ಕಿದೆ. ಇಂತಹ ದೇಶದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ ಎಂದರು. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ದೇಶ ಪುರಾತನ ಸಂಸ್ಕೃತಿ, ಧರ್ಮ ಮತ್ತು ದಾರ್ಶನಿಕ ವಿಚಾರಗಳನ್ನು ನಿಯಮಾನುಸಾರ ಪಾಲಿಸಿಕೊಂಡು ಬರುತ್ತಿದ್ದೇವೆ. ಈ ದೇಶದಲ್ಲಿ ನಾವು ಹುಟ್ಟಿರುವುದು ಸುಕೃತ ಆದ್ದರಿಂದ ಹೊಸದಾಗಿ ನಿರ್ಮಾಣ ಮಾಡಿರುವ ಈ ದೇವಸ್ಥಾನವನ್ನು ವಿಶೇಷ ಪೂಜಾ ಹೋಮ ಹವನಗಳ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ. ಆಚಾರ ವಿಚಾರ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ನಾನು ಮತ್ತೊಮ್ಮೆ ಈ ದೇವಸ್ಥಾನಕ್ಕೆ ಬರುತ್ತೇನೆ ಅಲ್ಲಿಯವರೆಗೆ ಈ ದೇವಸ್ಥಾನಕ್ಕೆ ಉತ್ತಮ ರಸ್ತೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್‌ಗೆ ಸೂಚನೆ ನೀಡಿದರು.

ಶಾಸಕ ಎಂ. ಆರ್ ಮಂಜುನಾಥ್ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣ ಸಹಕಾರದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಇದುವರೆಗೂ ಪ್ರತಿಯೊಂದು ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ತಿಳಿಸಿದರು. ನೂತನ ದೇವಾಲಯದ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾತೃ ಮುನೇಶ್, ಬಿಜೆಪಿ ಮುಖಂಡರಾದ ಡಾ.ದತ್ತೇಶ್ ಕುಮಾರ್, ನಿಶಾಂತ್, ಪಾಳ್ಯ ಸುಂದರ್, ಸಂದೀಪ್, ವೀರಭದ್ರ, ಅಖಿಲ ಭಾರತ ವೀರಶೈವ ಮಹಾಸಭೆಯ ತಾಲೂಕು ಅಧ್ಯಕ್ಷ ಸೋಮಶೇಖರ್, ಆನಾಪುರ ಉಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಧಾರ್ಮಿಕ ಶಕ್ತಿ ನಮ್ಮ ಅಸ್ತಿತ್ವ

ನಮ್ಮ ಭಾರತೀಯ ಸನಾತನ ಸಂಸ್ಕೃತಿ ಇರುವ ಧಾರ್ಮಿಕ ಶಕ್ತಿ ನಮ್ಮ ಅಸ್ತಿತ್ವವನ್ನು ಉಳಿಸುತ್ತದೆ. ರಷ್ಯಾ ಯುದ್ಧ ಶಸ್ತ್ರಾಸ್ತದಲ್ಲಿ, ಅಮೆರಿಕ ತಂತ್ರಜ್ಞಾನದಲ್ಲಿ, ಜಪಾನ್ ತನ್ನದೇ ಆದ ಅವಿಷ್ಕಾರ ಮಾಡುವಲ್ಲಿ, ಚೀನಾ ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ನಮ್ಮ ಭಾರತ ದೇಶಕ್ಕೆ ನಮ್ಮ ಸಂಸ್ಕೃತಿಗೆ ಶಕ್ತಿ ಯಾವುದೆಂದರೆ ಧಾರ್ಮಿಕ ನಂಬಿಕೆಯ ಶಕ್ತಿ, ನಮ್ಮ ದೇಶದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಯಾವ ಗ್ರಾಮದಲ್ಲಾದರೂ ಒಂದಲ್ಲ ಒಂದು ದೇವಸ್ಥಾನಗಳನ್ನು ಬೃಹದಾಕಾರವಾಗಿ ನಿರ್ಮಾಣ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಂತಹ ಪರಂಪರೆಗೆ ರಾಮಪುರದಲ್ಲಿ ನಿರ್ಮಾಣ ಮಾಡಿರುವ ಈ ದೇವಸ್ಥಾನವು ಸೇರುತ್ತದೆ.