ಸಾರಾಂಶ
ಬಹುನಿರೀಕ್ಷಿತ ಬಾಗಲಕೋಟೆ ಕುಡಚಿ ರೈಲು ಮಾರ್ಗವನ್ನು 2027ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಹುನಿರೀಕ್ಷಿತ ಬಾಗಲಕೋಟೆ ಕುಡಚಿ ರೈಲು ಮಾರ್ಗವನ್ನು 2027ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಖಜ್ಜಿಡೋಣಿ ನಿಲ್ದಾಣದ ಬಳಿ ಮಂಗಳವಾರ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾರ್ಗದ ಒಟ್ಟು ಕಾಮಗಾರಿ ವೆಚ್ಚ ₹1650 ಕೋಟಿ ಆಗಲಿದ್ದು ಸದ್ಯ ಶೇ.35ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು.ಪ್ರಸಕ್ತ ಬಜೆಟ್‌ನಲ್ಲಿ ಈ ವರ್ಷ ಈ ಕಾಮಗಾರಿಗೆ ₹140 ಕೋಟಿ ಹಣವನ್ನು ಮೀಸಲಿಡಲಿದ್ದು ಈಗಾಗಲೇ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ ಕಾಮಗಾರಿ ಪೂರ್ಣಗೊಂಡು ಮಾರ್ಚ್ ಅಂತ್ಯಕ್ಕೆ ಲೋಕಾಪೂರದವರೆಗೆ ಪೂರ್ಣಗೊಳ್ಳಲಿದೆ. ಈ ವರ್ಷ ಲೋಕಾಪೂರದಿಂದ ಯಾದವಾಡದವರೆಗೆ 23 ಕಿಮೀ ರೈಲು ಮಾರ್ಗ ನಿರ್ಮಾಣಗೊಂಡು 2025ರ ಸೆಪ್ಟೆಂಬರರ್‌ವರೆಗೆ ಮುಕ್ತಾಯಗೊಳ್ಳಲಿದೆ ಎಂದರು.
ಬಾಗಲಕೋಟೆ ಬೆಳಗಾವಿ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಈವರೆಗೆ ಇರಲಿಲ್ಲ. ಬೆಳಗಾವಿ ಸಂಪರ್ಕಿಸಲು ಬಾಗಲಕೋಟೆಯಿಂದ ಗದಗ- ಹುಬ್ಬಳ್ಳಿ- ಧಾರವಾಡ ರೈಲ್ವೆ ಮಾರ್ಗವನ್ನು ಅವಲಂಬಿಸಬೇಕಿತ್ತು. ನಿಗದಿತ ಸಮಯದಲ್ಲಿ ಬಾಗಲಕೋಟೆ ಕುಡಚಿ ಮಾರ್ಗ ಪೂರ್ಣಗೊಂಡರೆ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರವನ್ನು ವಿಸ್ತರಿಸಬಹುದಾಗಿದೆ ಎಂದು ತಿಳಿಸಿದರು.ಲೋಕಾಪೂರಕ್ಕೆ ಪ್ಯಾಸೆಂಜರ್ ರೈಲು:
ಬಾಗಲಕೋಟೆಯಿಂದ ಲೋಕಾಪೂರ ವರೆಗೆ ರೆಲ್ವೆ ಮಾರ್ಗ ಪೂರ್ಣಗೊಂಡಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಪ್ಯಾಸೆಂಜರ ರೈಲನ್ನು ಆರಂಭಿಸುವ ಕುರಿತು ಇಲಾಖೆ ಚಿಂತನೆ ನಡೆಸಿದ್ದು, ಸದ್ಯದಲ್ಲಿಯೇ ಸೂಕ್ತ ನಿರ್ಧಾರಕೈಗೊಳ್ಳುವುದಾಗಿ ಸಚಿವ ಸೋಮಣ್ಣ ತಿಳಿಸಿದರು.ವಂದೇ ಮಾತರಂ ರೈಲು ಓಡಿಸುವ ಚಿಂತನೆ:
ದೇಶಾದ್ಯಂತ ಈಗಾಗಲೇ ಸಂಪರ್ಕ ಸಾಧಿಸುತ್ತಿರುವ ವಂದೇ ಮಾತರಂ ರೈಲನ್ನು ಬಾಗಲಕೋಟೆ ಮಾರ್ಗದಲ್ಲಿ ಆರಂಭಿಸಲು ಹಲವು ತಾಂತ್ರಿಕ ಸಮಸ್ಯೆಗಳಿದೆ. ಉದಾಹರಣೆಗೆ ವೇಗದ ಮಿತಿಗೆ ಹಾಗೂ ವೇಗವನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಮಾರ್ಗದ ರೈಲು ಹಳಿಗಳಿಗೆ ಸಾಧ್ಯತೆ ಕುರಿತು ಪರಿಶೀಲಿಸಿ ಸೂಕ್ತ ತಂತ್ರಜ್ಞಾನದ ಅಳವಡಿಕೆ ನಂತರ ವಂದೇದೆ ಮಾತರಂ ರೈಲನ್ನು ಓಡಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಜಾನಕಿ, ಶಾಸಕರಾದ ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.