ಕೇಂದ್ರದ ಹುದ್ದೆಗಳಲ್ಲಿ ಅಂಗವಿಲಕರಿಗೂ ಬಡ್ತಿ ಮೀಸಲು

| Published : Dec 30 2023, 01:15 AM IST / Updated: Dec 30 2023, 10:55 AM IST

SN Tips to self promotion in job market
ಕೇಂದ್ರದ ಹುದ್ದೆಗಳಲ್ಲಿ ಅಂಗವಿಲಕರಿಗೂ ಬಡ್ತಿ ಮೀಸಲು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಿಬ್ಬಂದಿ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದ್ದು, 2016ರ ಜೂ.30ರ ಸೇವಾ ಮಾನದಂಡದಂತೆ ಅಂಗವಿಕಲರಿಗೆ ಬಡ್ತಿ ನೀಡಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.

ಪಿಟಿಐ ನವದೆಹಲಿ

ಮಹತ್ವದ ಕ್ರಮವೊಂದರಲ್ಲಿ, ಅಂಗವಿಕಲ (ದಿವ್ಯಾಂಗಜನರು) ಉದ್ಯೋಗಿಗಳಿಗೂ ಬಡ್ತಿಯಲ್ಲಿ ಮೀಸಲಾತಿ ಪ್ರಯೋಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.ಅರ್ಹ ಸಿಬ್ಬಂದಿಯನ್ನು 2016ರ ಜೂ.30ರಿಂದ ಅನ್ವಯ ಆಗುವಂತೆ ಬಡ್ತಿ ಮೀಸಲಿಗೆ ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.‘ಆದರೆ ಮೀಸಲು ಮೂಲಕ ಬಡ್ತಿ ಪಡೆದ ಅಂಗವಿಕಲರಿಗೆ ಪರಿಷ್ಕೃತ ವೇತನವು, ಅವರು ಬಡ್ತಿ ಪಡೆದು ಹುದ್ದೆಗೆ ಹಾಜರಾದ ದಿನಾಂಕದಿಂದ ಅನ್ವಯವಾಗುತ್ತದೆ. ಬಡ್ತಿಗೆ ‘ಸೇವಾ ಹಿರಿತನದ ಮಾನದಂಡ’ಮಾತ್ರ 2016ರ ಜೂ.30 ಆಗಿರುತ್ತದೆ. ಅರ್ಥಾತ್ 2016ರಿಂದಲೇ ಪೂರ್ವಾನ್ವಯ ಆಗುವಂತೆ ಅವರಿಗೆ ಯಾವುದೇ ವೇತನ ಹಿಂಬಾಕಿ ಸಿಗದು’ ಎಂದು ಸ್ಪಷ್ಟಪಡಿಸಲಾಗಿದೆ.

ಹೊಸದಾಗಿ ಹುದ್ದೆಗಳು ಸೃಷ್ಟಿ:ಆದರೆ ಈ ಹಂತದಲ್ಲಿ ಸೇವಾ ಹಿರಿತನ ಆಧರಿಸಿ ಅಂಗವಿಕಲರಿಗೆ ಬಡ್ತಿ ನೀಡಿದರೆ ಇತರ ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಆಗ ಗೊಂದಲ ಸೃಷ್ಟಿಯಾಗುತ್ತದೆ. ಹೀಗಾಗಿ ಇಂಥ ಗೊಂದಲ ತಪ್ಪಿಸಲು ಸೂಪರ್‌ನ್ಯೂಮರರಿ ಹುದ್ದೆಗಳನ್ನು (ನಿರ್ದಿಷ್ಟ ಅವಧಿಗೆ ವಿಶೇಷ ಸಂದರ್ಭಗಳಲ್ಲಿ ರಚಿಸಲಾದ ಶಾಶ್ವತ ಹುದ್ದೆಗಳು) ರಚಿಸುವಂತೆ ಸಿಬ್ಬಂದಿ ಸಚಿವಾಲಯವು ಸೂಚಿಸಿದೆ. ಇದರಿಂದಾಗಿ ವಿವಿಧ ಶ್ರೇಣಿಗಳ ಅಧಿಕಾರಿಗಳ ಸೇವಾ ಹಿರಿತನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಹಾಗೂ ‘ಆಡಳಿತಾತ್ಮಕ ಅನಾನುಕೂಲತೆ’ಯೂ ತಪ್ಪುತ್ತದೆ.ನೌಕರರ ಸಂಘಟನೆಗಳಾದ ಕೇಂದ್ರೀಯ ಸಚಿವಾಲಯ ಸೇವಾ ವೇದಿಕೆ, ಕೇಂದ್ರೀಯ ಸಚಿವಾಲಯ ಸೇವೆ (ಸಿಸಿಎಸ್‌) ಅಧಿಕಾರಿಗಳ ಸಂಘಗಳು ಇತ್ತೀಚೆಗೆ ಕೇಂದ್ರೀಯ ಸಿಬ್ಬಂದಿ ಸಚಿವಾಲಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲು ನೀಡಬೇಕು ಎಂದು ಕೋರಿದ್ದವು.