ಸಾರಾಂಶ
ಮುಂಬೈ: ಸರ್ಕಾರದ ಮುಖ್ಯಸ್ಥರು ಹಾಗೂ ನ್ಯಾಯಾಧೀಶರ ನಡುವೆ ಭೇಟಿ ನಡೆಯಿತು ಎಂದರೆ ‘ಎನೋ ಡೀಲ್ ಆಗಿದೆ’ ಎಂದರ್ಥ ಅಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾ। ಚಂದ್ರಚೂಡ ಅವರ ದಿಲ್ಲಿ ನಿವಾಸಕ್ಕೆ ಭೇಟಿ ನೀಡಿ ಗಣೇಶೋತ್ಸವ ವೇಳೆ ಗಣಪತಿ ದರ್ಶನ ಮಾಡಿದ್ದರು. ‘ಒಬ್ಬ ಹಾಲಿ ಸಿಜೆಐ ಅವರ ಮನೆಗೆ ಈ ರೀತಿ ಪ್ರಧಾನಿಯೊಬ್ಬರು ಹೋಗುವುದು ಸರಿಯೇ? ಇದು ನಿಷ್ಪಕ್ಷಪಾತ ನ್ಯಾಯಾಂಗಕ್ಕೆ ಧಕ್ಕೆ ಥಂದಂತಲ್ಲವೇ?’ ಎಂದು ವಿಪಕ್ಷಗಳು ಕಿಡಿಕಾರಿದ್ದವು.
ಇದಕ್ಕೆ ಮುಂಬೈನಲ್ಲಿ ನಡೆದ ಸಭೆಯೊಂದರಲ್ಲಿ ಪ್ರತಿಕ್ರಿಯೆ ನೀಡಿದ ಚಂದ್ರಚೂಡ್, ‘ಸರ್ಕಾರದ ಮುಖ್ಯಸ್ಥರನ್ನು ನಾವು ಭೇಟಿ ಮಾಡಿದೆವು ಎಂದರೆ ಏನೋ ಡೀಲ್ ಆಗಿದೆ ಎಂದರ್ಥವಲ್ಲ. ನ್ಯಾಯಾಂಗಕ್ಕೆ ಬಜೆಟ್ ನೀಡುವುದೇ ಸರ್ಕಾರ. ಅದಕ್ಕೆ ಸಂಬಂಧಿಸಿದಂತೆ ನಾವು ಚರ್ಚಿಸಲು ಸರ್ಕಾರ ಮುಖ್ಯಸ್ಥರ ಭೇಟಿ ಮಾಡುತ್ತೇವೆ. ಸರ್ಕಾರ ಬಜೆಟ್ ನೀಡುವುದು ನ್ಯಾಯಾಂಗ ಇಲಾಖೆಗೇ ವಿನಾ ಜಡ್ಜ್‌ಗಳಿಗೆ ಅಲ್ಲ’ ಎಂದು ಸೂಚ್ಯವಾಗಿ ಹೇಳಿದರು.
‘ಇಂಥ ಭೇಟಿಗಳು ನ್ಯಾಯಾಂಗ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲ್ಲ. ನನ್ನ ಅನುಭವದ ಪ್ರಕಾರ ನಾನು ಯಾವುದೇ ಸರ್ಕಾರದ ಮುಖ್ಯಸ್ಥರನ್ನು ಭೇಟಿ ಆದಾಗಲೂ ಯಾವುದೇ ಪೆಂಡಿಂಗ್ ಕೇಸುಗಳ ಬಗ್ಗೆ ಅವರು ನನ್ನ ಜತೆ ಚರ್ಚಿಸಿಲ್ಲ. ಇಂಥ ಭೇಟಿ ವೇಳೆ ರಾಜಕೀಯ ನಾಯಕರು ಅತ್ಯಂತ ಪ್ರೌಡಿಮೆಯಂತೆ ವರ್ತಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.