ಸಾರಾಂಶ
ನವದೆಹಲಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದೆ. ಪ್ರತಿಭಟನೆಗೆ ಕರೆ ನೀಡಿದ್ದ ಸ್ಥಾನಿಕ ವೈದ್ಯರ ಸಂಸ್ಥೆಯು ತಮ್ಮ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿದ್ದರೂ, ಇತರ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರೆದಿದೆ. ಪರಿಣಾಮ ದೇಶದ ಹಲವೆಡೆ ಬುಧವಾರವೂ ವೈದ್ಯಕೀಯ ಸೇವೆಯಲ್ಲಿ ಅಡಚಣೆಯುಂಟಾಗಿದೆ.
ಘಟನೆಯ ಕೇಂದ್ರ ಬಿಂದು ಪಶ್ಚಿಮ ಬಂಗಾಳದಲ್ಲಿ ಬುಧವಾರವೂ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿತು. ಹಿರಿಯ ವೈದ್ಯರು ಕೂಡ ಕರ್ತವ್ಯಕ್ಕೆ ಹಾಜರಾಗದೇ ಕಿರಿಯ ವೈದ್ಯರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ವೈದ್ಯರ ಪ್ರತಿಭಟನೆಯ ಪರಿಣಾಮ ಇಲ್ಲಿನ ಹಲವು ಆಸ್ಪತ್ರೆಗಳಲ್ಲಿ ಹೊರ ರೋಗಿ ಚಿಕಿತ್ಸಾ ಘಟಕದಲ್ಲಿ ಬಹು ದೂರದವರೆಗೆ ಸರತಿ ಸಾಲಿನಲ್ಲಿ ರೋಗಿಗಳ ನಿಂತಿರುವುದು ಕಂಡು ಬಂತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ವೈದ್ಯರ ಪ್ರತಿಭಟನೆ ಮೂರನೇ ದಿನವೂ ಮುಂದುವರೆಯಿತು. ದೆಹಲಿಯ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ಸ್‌ನ ಏಮ್ಸ್, ವಿಎಂಎಂಸಿ,ಸಫರ್‌ಜಂಗ್, ರಾಮ ಮನೋಹರ್ ಲೋಹಿಯಾ,ಇಂದಿರಾ ಗಾಂಧಿ ಆಸ್ಪತ್ರೆಗಳಲ್ಲಿ ವೈದ್ಯರು ಒಪಿಡಿ ಸೇರಿದಂತೆ ಆಸ್ಪತ್ರೆಯ ಕೆಲ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮುಂದುವರೆಸಿದರು.
ದೇಶದ ಹಲವು ರಾಜ್ಯಗಳಲ್ಲಿ ಪ್ರಮುಖ ಆಸ್ಪತ್ರೆಗಳಲ್ಲಿ ಬುಧವಾರವೂ ಇದೇ ಪರಿಸ್ಥಿತಿ ಕಂಡು ಬಂತು. ಉತ್ತರ ಪ್ರದೇಶದಲ್ಲಿ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ 200 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು, ಕಿರಿಯ ವೈದ್ಯರು ಘಟನೆ ಖಂಡಿಸಿ ಬೃಹತ್ ಮೆರವಣಿಗೆ ನಡೆಸಿದರು. ಯುಪಿಯ ನೋಯ್ಡಾ, ವಾರಣಾಸಿ, ಆಗ್ರಾ, ಗೋರಖ್‌ಪುರ, ಝಾನ್ಸಿ ಸೇರಿದಂತೆ ಹಲವೆಡೆ ಮುಷ್ಕರ ನಡೆಯಿತು. ರಾಜಸ್ಥಾನ, ಜಾರ್ಖಂಡ್‌ನಲ್ಲಿಯೂ ವೈದ್ಯರು ಘಟನೆ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಿದರು.