ಸಾರಾಂಶ
ನವದೆಹಲಿ: ‘ಪತ್ರಕರ್ತರು ಇಂದು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ವೈಯುಕ್ತಿಕ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ನಾನು ಯಾವುದೇ ಸುದ್ದಿಗೋಷ್ಠಿಯನ್ನು ನಡೆಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಾವು ಅಧಿಕಾರಕ್ಕೆ ಬಂದ ಮೇಲೆ ಸುದ್ದಿಗೋಷ್ಠಿಯನ್ನುನಡೆಸದೇ ಇರುವುದಕ್ಕೆ ಅವರು ಈ ಸಮರ್ಥನೆ ನೀಡಿದ್ದಾರೆ. ಆಜ್ ತಕ್‌ಗೆ ನೀಡಿದ ಸಂದರ್ಶನವೊಂದರ ವೇಳೆ ಸಂದರ್ಶಕರು, ‘ನೀವೇಕೆ ಸುದ್ದಿಗೋಷ್ಠಿ ನಡೆಸುವುದಿಲ್ಲ?’ ಎಂದು ಕೇಳಿದರು.
ಆಗ ಉತ್ತರಿಸಿದ ಮೋದಿ, ‘ನಾನು ಸಂಸತ್‌ಗೆ ಜವಾಬ್ದಾರನಾಗಿರುತ್ತೇನೆ. ಇಂದು ಮಾಧ್ಯಮಗಳ ಸ್ವರೂಪಗಳು ಬದಲಾಗುತ್ತಿದೆ. ಪತ್ರಕರ್ತರು ತಮ್ಮ ವೈಯುಕ್ತಿಕ ಅಭಿಪ್ರಾಯ ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದಾರೆ’ ಎಂದರು.
‘ಈ ಹಿಂದೆ ಯಾವ ಲೇಖನ, ವರದಿ ಯಾರು ಬರೆಯುತ್ತಾರೆ ಎಂದು ಗೊತ್ತಾಗುತ್ತಿರಲಿಲ್ಲ. ಇತ್ತೀಚಿಗೆ ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಮಾಧ್ಯಮ ಇಂದು ತಟಸ್ಥವಾಗಿ ಉಳಿದಿಲ್ಲ. ಜನರಿಗೆ ಪತ್ರಕರ್ತರ ನಂಬಿಕೆ ಮತ್ತು ಆದ್ಯತೆಗಳ ಏನು ಅನ್ನುವುದು ತಿಳಿದಿದೆ. ಜೊತೆಗೆ ಅವರ ಮುಖ ಪರಿಚಯವೂ ಗೊತ್ತಾಗಿದೆ. ಯಾರು ಬರೆಯುತ್ತಾರೆ. ಅವರ ಆದ್ಯತೆಗಳು ಏನು ಅನ್ನೋದು ತಿಳಿದಿದೆ’ ಎಂದರು.