ಫ್ರಂಟ್‌ ವಿಂಡ್‌ ಶೀಲ್ಡ್‌ಗೆ ಫಾಸ್ಟ್‌ ಟ್ಯಾಗ್ ಅಳವಡಿಸದಿದ್ದರೆ ದುಪ್ಪಟ್ಟು ಟೋಲ್‌ ಶುಲ್ಕ

| Published : Jul 19 2024, 12:49 AM IST / Updated: Jul 19 2024, 05:21 AM IST

ಸಾರಾಂಶ

ವಾಹನದ ಮುಂದಿನ ಗಾಜಿನ ಮೇಲೆ (ಫ್ರಂಟ್‌ ವಿಂಡ್‌ಶೀಲ್ಡ್‌) ಫಾಸ್ಟ್‌ಪ್ಯಾಗ್ ಅಳವಡಿಸದೇ ಬೇರೆ ಕಡೆ ಅಳವಡಿಸಿದ್ದರೆ, ಅಂಥವರಿಂದ 2 ಪಟ್ಟು ಅಧಿಕ ಟೋಲ್ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ನವದೆಹಲಿ: ವಾಹನದ ಮುಂದಿನ ಗಾಜಿನ ಮೇಲೆ (ಫ್ರಂಟ್‌ ವಿಂಡ್‌ಶೀಲ್ಡ್‌) ಫಾಸ್ಟ್‌ಪ್ಯಾಗ್ ಅಳವಡಿಸದೇ ಬೇರೆ ಕಡೆ ಅಳವಡಿಸಿದ್ದರೆ, ಅಂಥವರಿಂದ 2 ಪಟ್ಟು ಅಧಿಕ ಟೋಲ್ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಬೇರೆ ಗಾಜುಗಳ ಮೇಲೆ ಫಾಸ್ಟ್‌ಪ್ಯಾಗ್ ಅಂಟಿಸಿದ್ದರೆ ಅದನ್ನು ಸ್ಕ್ಯಾನ್ ಮಾಡುವುದರಲ್ಲಿ ತಡವಾಗುವ ಕಾರಣ ಟ್ರಾಫಿಕ್‌ ಜಾಂ ಆಗಿ ಅನ್ಯ ವಾಹನಗಳಿಗೆ ಸಮಸ್ಯೆಯಾಗುತ್ತದೆ. ಇದನ್ನು ತಡೆಯಲು ಶುಲ್ಕ ಸಂಗ್ರಹಿಸುವ ಸಂಸ್ಥೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೊಳಿಸಲಾಗಿದ್ದು, ದ್ವಿಗುಣ ಟೋಲ್ ಶುಲ್ಕ ಹೇರುವಂತೆ ಸೂಚಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದ ವಾಹನದ ನೋಂದಣಿ ಸಂಖ್ಯೆಯನ್ನು ಸಿಸಿಟಿವಿಯಲ್ಲಿ ದಾಖಲಿಸಲಾಗುವುದು.

ಥಾಮಸ್‌ ಎಂಬಾತನಿಂದ ತಿರುಪತಿ ಲಡ್ಡು ತಯಾರಿಕೆ ವರದಿ ಸುಳ್ಳು: ಟಿಟಿಡಿ

ತಿರುಮಲ: ‘ತಿರುಮಲದಲ್ಲಿ ಥಾಮಸ್‌ ಎಂಬ ಅನ್ಯಧರ್ಮೀಯ ವ್ಯಕ್ತಿ ಲಡ್ಡು ಪ್ರಸಾದ ತಯಾರಿಸುವ ಹೊಣೆ ಹೊತ್ತಿದ್ದಾನೆ ಹಾಗೂ ಅವುಗಳು ಈಗ ತಾಜಾ ಸ್ಥಿತಿಯಲ್ಲಿ ಸಿಗುತ್ತಿಲ್ಲ’ ಎಂಬ ಯೂಟ್ಯೂಬ್ ಚಾನೆಲ್ ಒಂದರ ವರದಿಯನ್ನು ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ತಳ್ಳಿಹಾಕಿದೆ ಹಾಗೂ ಈ ಸುಳ್ಳು ವರದಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಘೋಷಣೆ ಮಾಡಿದೆ.ಗುರುವಾರ ಸ್ಪಷ್ಟನೆ ನೀಡಿರುವ ಟಿಡಿಟಿ, ‘ಲಡ್ಡುವನ್ನು ಹಲವಾರು ಶತಮಾನಗಳಿಂದ ಶ್ರೀ ವೈಷ್ಣವ ಬ್ರಾಹ್ಮಣರು ತಯಾರಿಸುತ್ತಿದ್ದಾರೆ. ಈಗ ಅಡುಗೆಮನೆಯಲ್ಲಿ ಪ್ರಸ್ತುತ 980 ಶ್ರೀವಷ್ಣವರು ಕೆಲಸ ಮಾಡುತ್ತಿದ್ದಾರೆ. ಅವರೇ ಲಡ್ಡು ತಯಾರಿಕಾ ಪದಾರ್ಥ ತರುತ್ತಾರೆ. ತಾಜಾ ತಾಜಾ ಲಡ್ಡು ತಯಾರಿಸುತ್ತಾರೆ’ ಎಂದು ಸ್ಪಷ್ಟಪಡಿಸಿದೆ.

ತೆಲಂಗಾಣ: 2 ಲಕ್ಷ ರು. ಕೃಷಿ ಸಾಲ ಮನ್ನಾಗೆ ಸರ್ಕಾರದಿಂದ ಚಾಲನೆ

ಹೈದರಾಬಾದ್: ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 70 ಲಕ್ಷ ಕೃಷಿಕರ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವ ಕಾರ್ಯಕ್ರಮಕ್ಕೆ ತೆಲಂಗಾಣ ಸರ್ಕಾರ ಗುರುವಾರ ಚಾಲನೆ ನೀಡಿದೆ.ಇದರ ಅನ್ವಯ ಗುರುವಾರ ಸಂಜೆ 4ರ ಹೊತ್ತಿಗೆ ರೈತರ ಖಾತೆಗಳಿಗೆ 1 ಲಕ್ಷ ರು. ಜಮೆಯಾಗಿದ್ದು, ಒಟ್ಟು 7,000 ಕೋಟಿ ರು. ವನ್ನು ಇದಕ್ಕೆ ವ್ಯಯಿಸಲಾಗಿದೆ. ಜೂನ್ ತಿಂಗಳ ಕೊನೆಯಲ್ಲಿ 1.5 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ ಆಗಲಿದ್ದು, ಆ.15ರ ಒಳಗಾಗಿ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಘೋಷಿಸಿದ್ದಾರೆ.ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಾಲ ಮನ್ನಾದ ಬಗ್ಗೆ ಪ್ರಶ್ನೆಗಳು ಉದ್ಭವವಾದಲ್ಲಿ ಅದಕ್ಕೆ ಉತ್ತರಿಸಲು 2 ಜಿಲ್ಲೆಗಳಿಗೆ ಒಬ್ಬರಂತೆ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.