ಮದುಮಕ್ಕಳಂತೆ ಸಿಂಗರಿಸಿ 26ನೇ ವಿವಾಹ ವಾರ್ಷಿಕೋತ್ಸವ ದಿನ ಪತಿ - ಪತ್ನಿ ಆತ್ಮಹತ್ಯೆ

| Published : Jan 09 2025, 12:45 AM IST / Updated: Jan 09 2025, 05:43 AM IST

ಸಾರಾಂಶ

ವಧು- ವರರಂತೆ ಸಿಂಗರಿಸಿಕೊಂಡು ತಮ್ಮ 26ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ದಂಪತಿ, ಬಳಿಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ.

ನಾಗ್ಪುರ: ವಧು- ವರರಂತೆ ಸಿಂಗರಿಸಿಕೊಂಡು ತಮ್ಮ 26ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ದಂಪತಿ, ಬಳಿಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ. ಮೃತರನ್ನು ಜೆರಿಲ್ ಡ್ಯಾಮ್ಸನ್ ಆಸ್ಕರ್(57) ಹಾಗೂ ಆ್ಯನಿ (46) ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆ ಹಾಗೂ ಮಕ್ಕಳಿಲ್ಲದ ಕೊರಗು ಇವರ ಸಾವಿಗೆ ಕಾರಣ ಎನ್ನಲಾಗಿದೆ.

ಏನಿದು ಘಟನೆ?:

26 ವರ್ಷ ಅನ್ಯೋನ್ಯ ಜೀವನ ನಡೆಸಿದ್ದ ಆಸ್ಕರ್ ಹಾಗೂ ಆ್ಯನಿ, ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ತಮ್ಮ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿ ಸಂಭ್ರಮಿಸಿದ್ದರು. ಅದಾದ ಬಳಿಕ ವಿದಾಯ ಸಂದೇಶ ಹಾಗೂ ಮರಣ ಪತ್ರಗಳನ್ನು ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡ ದಂಪತಿ, ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದಿದ್ದರು. 

ಈ ಸಂದೇಶ ನೋಡಿ ಗಾಬರಿಯಾದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಅವರ ಮನೆ ಹೊಕ್ಕ ಪೊಲೀಸರಿಗೆ ಮದುಮಕ್ಕಳಂತೆ ಸಿಂಗರಿಸಿಕೊಂಡಿದ್ದ ಆ್ಯನಿ ಹಾಗೂ ಆಸ್ಕರ್‌ರ ಮೃತದೇಹಗಳು ಕಂಡುಬಂದಿದೆ. ಮೊದಲು ಆ್ಯನಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಆಸ್ಕರ್‌ ಅಡುಗೆಮನೆಯಲ್ಲಿ ನೇಣಿಗೆ ಶರಣಾದರು ಎನ್ನಲಾಗಿದೆ. ದಂಪತಿಯ ಕೊನೆ ಇಚ್ಛೆಯಂತೆ ಕೈಕೈ ಹಿಡಿದುಕೊಂಡ ಸ್ಥಿತಿಯಲ್ಲೇ ಇಬ್ಬರನ್ನೂ ಹೂಳಲಾಯ್ತು.