ಯಾವುದೇ ಕ್ಷಣ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ

| Published : Nov 23 2023, 01:45 AM IST

ಯಾವುದೇ ಕ್ಷಣ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

41 ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ಭಾರೀ ಪ್ರಗತಿ. 57 ಮೀ. ಪೈಕಿ ಈಗಾಗಲೇ 45 ಮೀ. ರಂಧ್ರ ಪೂರ್ಣ.

ಉತ್ತರಕಾಶಿ: ಉತ್ತರಖಂಡದ ಉತ್ತರಕಾಶಿ ಬಳಿಯ ನಿರ್ಮಾಣ ಹಂತದ ಸಿಲ್‌ಕ್ಯಾರಾ ಹೆದ್ದಾರಿ ಸುರಂಗದೊಳಗೆ ಕಳೆದ 11 ದಿನಗಳಿಂದ ಸಿಕ್ಕಿಬಿದ್ದಿರುವ 41 ಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ಬಹುತೇಕ ಅಂತಿಮ ಘಟ್ಟ ತಲುಪಿದ್ದು, ಯಾವುದೇ ಕ್ಷಣದಲ್ಲಿ ಅಲ್ಲಿಂದ ಸಿಹಿ ಸುದ್ದಿ ಹೊರಬೀಳುವ ನಿರೀಕ್ಷೆ ಇದೆ. ಬಹುಶಃ ಗುರುವಾರ ಬೆಳಗ್ಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಮಿಕರು 57 ಮೀ. ದೂರದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಬುಧವಾರ ಸಂಜೆಯವರೆಗೆ 45 ಮೀ. ವರೆಗೆ ಸಮತಲ ರೇಖೆಯಲ್ಲಿ ಗುಡ್ಡಕ್ಕೆ ರಂಧ್ರ ಕೊರೆದು 80 ಸೆಂ.ಮೀ. ಸುತ್ತಳತೆಯ ಪೈಪ್‌ ಹಾಕಲಾಗಿದೆ. ಇನ್ನೂ 12 ಮೀ. ದೂರದಷ್ಟು ರಂಧ್ರ ಕೊರೆದು ಪೈಪ್‌ ಹಾಕಬೇಕಿದೆ. ಸುಮಾರು 45ರಿಂದ 50 ಮೀ.ವರೆಗೆ ಗುಡ್ಡ ಅಗೆದು ಪೈಪ್‌ ಹಾಕುವುದು ಸವಾಲಿನದಾಗಿದೆ. ಇಲ್ಲಿ ಯಾವುದೇ ಅಡೆತಡೆ ಉಂಟಾಗದೇ ಯಶಸ್ಸು ಕಂಡರೆ ಗುರುವಾರ ಬೆಳಗ್ಗಿನ ಹೊತ್ತಿಗೆ ಸಿಲುಕಿದ ಕಾರ್ಮಿಕರು ಇರುವ ಜಾಗ ತಲುಪಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿ ಆಗುತ್ತೇವೆ ಎಂದು ರಕ್ಷಣಾ ಕೆಲಸದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಡಿ ಮೊಹಮ್ಮದ್‌ ಅಹಮ್ಮದ್‌ ಹಾಗೂ ಪ್ರಧಾನಿ ಕಚೇರಿ ಮಾಜಿ ಸಲಹೆಗಾರ ಭಾಸ್ಕರ್‌ ಕುಲ್ಬೆ ಹೇಳಿದ್ದಾರೆ.

ಈ ನಡುವೆ 21 ರಕ್ಷಣಾ ಸಿಬ್ಬಂದಿಯು ಗ್ಯಾಸ್‌ ಮಾಸ್ಕ್‌ ಧರಿಸಿ ಹೊಸದಾಗಿ ಕೊರೆದು ಹಾಕಲಾಗಿರುವ ರಕ್ಷಣಾ ಪೈಪ್‌ ಪ್ರವೇಶಿಸಿದ್ದಾರೆ. ಇವರು ಸಿಲುಕಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರುವ ಹೊಣೆ ಹೊತ್ತಿದ್ದಾರೆ. 15 ವೈದ್ಯರು ಹಾಗೂ 30 ಆ್ಯಂಬುಲೆನ್ಸ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣೆಗೆ ಒಳಗಾಗುವ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮೀಪದ ಆಸ್ಪತ್ರೆಯಲ್ಲಿ 41 ಬೆಡ್‌ಗಳನ್ನೂ ಸಿದ್ಧಪಡಿಸಲಾಗಿದೆ.

ಇದಲ್ಲದೆ ಪರ್ಯಾಯ ಯೋಜನೆಯಾಗಿ ನಾವು ಸುರಂಗದ ಇನ್ನೊಂದು ಬದಿಯಾದ ಬಾರ್ಕೋಟ್‌ನಿಂದಲೂ ಸುರಂಗ ಕೊರೆಯುವ ಕೆಲಸ ಆರಂಭಿಸಿದ್ದೇವೆ . ಅಲ್ಲಿ ಈಗಾಗಲೇ 8 ಮೀಟರ್‌ ಜಾಗವನ್ನು ಕ್ರಮಿಸಿದ್ದೇವೆ. ಆದರೆ ಈ ಮಾರ್ಗದಲ್ಲಿ ಹೆಚ್ಚಿನ ಜಾಗ ಕ್ರಮಿಸಬೇಕಿರುವ ಕಾರಣ ನಮ್ಮ ಆದ್ಯತೆ ಸಿಲ್‌ಕ್ಯಾರಾ ಮಾರ್ಗವೇ ಆಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೋದಿ ಮಾಹಿತಿ:ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.