ಸಾರಾಂಶ
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಲವು ವಿಷಯಗಳಲ್ಲಿ ಭಾರತ ಮಾಡಿರುವ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ಭಾರತೀಯ ನಾಗರಿಕರ ಮುಂದೆ ಇರುವ ಜವಾಬ್ದಾರಿಗಳನ್ನು ಉಲ್ಲೇಖಿಸಿದರು.
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಗಿರುವುದು ಭಾರತದ ಪುರಾತನ ನಾಗರಿಕತೆಯ ಪುನರುತ್ಥಾನದ ಸಂಕೇತ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು. 75ನೇ ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ‘ರಾಮಮಂದಿರದ ವಾಸ್ತುಶಿಲ್ಪ ಅದ್ಬುತವಾಗಿದ್ದು, ಇತಿಹಾಸಕಾರರು ಇದನ್ನು ಒಂದು ಮೈಲಿಗಲ್ಲು ಎಂದು ಭವಿಷ್ಯದಲ್ಲೂ ಪರಿಗಣಿಸುತ್ತಾರೆ’ ಎಂದು ತಿಳಿಸಿದರು.
ಜೊತೆಗೆ ಕಳೆದ ವರ್ಷ ಜಿ-20 ಅಧ್ಯಕ್ಷತೆಯನ್ನು ಭಾರತವು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೂ ದೇಶವು ಅಮೃತ ಕಾಲದಿಂದ ಸ್ವಾತಂತ್ರ್ಯದ ಶತಾಬ್ದಿ ವರ್ಷಕ್ಕೆ ಕಾಲಿಡುವ ಮುನ್ನ ನಾಗರಿಕರು ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು ಮುನ್ನಡೆದರೆ ದೇಶ ಅತಿದೊಡ್ಡ ಆರ್ಥಿಕತೆಯಅಗುವ ಎಲ್ಲ ಅವಕಾಶಗಳಿವೆ ಎಂದು ಆಶಾವಾದ ವ್ಯಕ್ತಪಡಿಸಿದರು.ಹಾಗೆಯೇ ಚಂದ್ರಯಾನ-3 ಮತ್ತು ಆದಿತ್ಯಯಾನದಲ್ಲಿ ಭಾರತ ಯಶಸ್ವಿಯಾಗಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜೊತೆಗೆ ಹೊಸ ಶಿಕ್ಷಣ ನೀತಿಯಿಂದಾಗಿ ಎಲ್ಲ ಶಾಲೆಗಳಲ್ಲೂ ಶಿಕ್ಷಣ ಹಕ್ಕು 12ನೇ ತರಗತಿಯವರೆಗೂ ವಿಸ್ತರಣೆಯಾಗಿದೆ ಎಂದು ತಿಳಿಸಿದರು. ಅಲ್ಲದೆ ನಾರಿಶಕ್ತಿ ಅಧಿನಿಯಮದಿಂದ ಮಹಿಳೆಯರು ಶಾಸನಸಭೆಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ಒಳಿತು ಮಾಡಲು ಪುರುಷರಿಗೆ ಸಮಾನವಾದ ಅವಕಾಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.