ಸಾರಾಂಶ
ನವದೆಹಲಿ: ಹಲವರಿಗೆ ಸಾಮ್ಯ ಮತದಾರರ ಸಂಖ್ಯೆ (ಚುನಾವಣಾ ಗುರುತಿನ ಚೀಟಿಯಲ್ಲನ ಎಪಿಕ್ ನಂಬರ್) ನೀಡಲಾದ ಅಂಶವನ್ನು ಮುಂದಿಟ್ಟುಕೊಂಡು, ‘ಬಿಜೆಪಿ ತನ್ನ ಪರವಾಗಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದೆ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಡಿದ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
‘ಒಂದೇ ರೀತಿಯ ಮತದಾರರ ಸಂಖ್ಯೆ ಇದ್ದಮಾತ್ರಕ್ಕೆ ಅವರೆಲ್ಲಾ ನಕಲಿ ಮತದಾರರಾಗುವುದಿಲ್ಲ’ ಎಂದು ಅದು ತಿಳಿಸಿದೆ. ಬೇರೆಬೇರೆ ರಾಜ್ಯಗಳಲ್ಲಿರುವ ಮತದಾರರಿಗೆ ಒಂದೇ ರೀತಿಯ ಎಪಿಕ್ ಸಂಖ್ಯೆ ಲಭಿಸಿದ ಬಗ್ಗೆ ಗೊಂದಲಗಳು ಸೃಷ್ಟಿಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ‘ಎಪಿಕ್ ಸಂಖ್ಯೆ ಒಂದೇ ರೀತಿಯಿದ್ದರೂ, ವಿಳಾಸ, ಕ್ಷೇತ್ರ, ಮತಗಟ್ಟೆಗಳಂತಹ ಮಾಹಿತಿಗಳು ಭಿನ್ನವಾಗಿರುತ್ತವೆ. ಹೀಗಿರುವಾಗ, ಮತದಾರರು ತಮಗೆ ನಿಗದಿಪಡಿಸಲಾದಲ್ಲಿಯೇ ಮತದಾನ ಮಾಡಲು ಸಾಧ್ಯ’ ಎಂದು ಹೇಳಿದೆ.
ಅಂತೆಯೇ, ಎಲ್ಲಾ ರಾಜ್ಯಗಳ ಮತದಾರರ ಪಟ್ಟಿಯ ಮಾಹಿತಿಯನ್ನು ಎರೋನೆಟ್ ವೇದಿಕೆಗೆ ವರ್ಗಾಯಿಸುವ ಮೊದಲು ಸಿಬ್ಬಂದಿ ಖುದ್ದಾಗಿ ಹಾಗೂ ಇದು ವಿಕೇಂದ್ರಿಕೃತ ವ್ಯವಸ್ಥೆಯಾಗಿರುತ್ತದೆ. ಜೊತೆಗೆ ಬೇರೆ ಬೇರೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಒಂದೇ ಅನುಕ್ರಮದಲ್ಲಿ ಅವುಗಳನ್ನು ಬಳಸುವುದರಿಂದ ಕೆಲ ರಾಜ್ಯಗಳಲ್ಲಿ ಸಾಮ್ಯ ಎಪಿಕ್ ಸಂಖ್ಯೆಗಳು ಕಂಡುಬರುತ್ತವೆ ಎಂದು ಸ್ಪಷ್ಟನೆ ನೀಡಿದೆ.
ಮಮತಾ ಆರೋಪವೇನು?:
‘ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ತಮ್ಮ ಪರವಾಗಿ ನಕಲಿ ಮತದಾರರನ್ನು ಸೇರಿಸಿಕೊಳ್ಳಲು ಚುನಾವಣಾ ಆಯೋಗದೊಂದಿಗೆ ಸೇರಿ, ಬಿಜೆಪಿ ಕುತಂತ್ರ ನಡೆಸುತ್ತಿದೆ’ ಎಂದು ಮಮತಾ ಆರೋಪಿಸಿದ್ದರು.