ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಕಾಂಗ್ರೆಸ್‌ನ ಆರೋಪ ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

| Published : Dec 01 2024, 01:31 AM IST / Updated: Dec 01 2024, 07:39 AM IST

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಗಂಭೀರ ಸ್ವರೂಪದ ಅಸಮಂಜಸ ಸಂಗತಿಗಳು ಪತ್ತೆಯಾಗಿವೆ. ಶೇಕಡಾವಾರು ಮತದಾನದ ಪ್ರಮಾಣ ಭಾರಿ ಜಿಗಿತ ಕಂಡಿದೆ ಎಂದು ಕಾಂಗ್ರೆಸ್‌ ಮಾಡಿದ್ದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಗಂಭೀರ ಸ್ವರೂಪದ ಅಸಮಂಜಸ ಸಂಗತಿಗಳು ಪತ್ತೆಯಾಗಿವೆ. ಶೇಕಡಾವಾರು ಮತದಾನದ ಪ್ರಮಾಣ ಭಾರಿ ಜಿಗಿತ ಕಂಡಿದೆ ಎಂದು ಕಾಂಗ್ರೆಸ್‌ ಮಾಡಿದ್ದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.ಇದೇ ವೇಳೆ, ಖುದ್ದಾಗಿ ವಿಚಾರಣೆ ಆಲಿಸಲು ಸಮಯಾವಕಾಶ ನೀಡಿದರೆ ತನ್ನ ಆರೋಪಕ್ಕೆ ಸೂಕ್ತ ದಾಖಲೆ ಸಲ್ಲಿಸುವುದಾಗಿ ಕಾಂಗ್ರೆಸ್‌ ಹೇಳಿದ್ದ ಹಿನ್ನೆಲೆಯಲ್ಲಿ ಡಿ.3ರ ಸಂಜೆ 5ಕ್ಕೆ ವಿಚಾರಣೆಗೆ ಬರುವಂತೆ ನಿರ್ದೇಶನ ನೀಡಿದೆ.

ಸಂಜೆ 5ರ ನಂತರ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ ಎಂದು ಆರೋಪವನ್ನು ಅಲ್ಲಗಳೆದಿರುವ ಆಯೋಗ, ಮತದಾನ ಪ್ರಮಾಣದ ವಿವರ ನೀಡುವ ಆ್ಯಪ್‌ನಲ್ಲಿ ಮತದಾನ ಪ್ರಮಾಣವನ್ನು ನಿರಂತರವಾಗಿ ಅಪ್‌ಲೋಡ್‌ ಮಾಡಲಾಗಿದೆ ಎಂದು ತಿಳಿಸಿದೆ.

ಡಿ.3ರಂದು ಸಂಜೆ 5ಕ್ಕೆ ಕಾಂಗ್ರೆಸ್‌ನಿಂದ ವಿವರ ಆಲಿಸಿ, ಚುನಾವಣಾ ಆಯೋಗವು ಪಕ್ಷ ಎತ್ತಿರುವ ವಿಷಯಗಳಿಗೆ ಸೂಕ್ತವಾದ ಸಮಯದಲ್ಲಿ ಸುದೀರ್ಘ ಉತ್ತರ ನೀಡಲಿದೆ ಎಂದು ತಿಳಿಸಿದೆ.

ಸಂಜೆ 5ಕ್ಕೆ ಶೇ.58ರಷ್ಟಿದ್ದ ಮತದಾನ ಪ್ರಮಾಣ ರಾತ್ರಿ 11ರ ವೇಳೆಗೆ ಶೇ.65ಕ್ಕೇರಿಕೆಯಾಗಿತ್ತು, ವಿಧಾನಸಭೆ ಕ್ಷೇತ್ರಗಳಲ್ಲಿ ಸ್ವೇಚ್ಛಾಚಾರವಾಗಿ ಮತದಾರರ ಹೆಸರನ್ನು ಕೈಬಿಟ್ಟು 10 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿತ್ತು, ಮತದಾರರ ಸಂಖ್ಯೆ 50 ಸಾವಿರದಷ್ಟು ಹೆಚ್ಚಾದ ಕ್ಷೇತ್ರಗಳಲ್ಲಿ ಬಿಜೆಪಿ ಕೂಟ 47ರಲ್ಲಿ ಗೆಲುವು ಸಾಧಿಸಿತ್ತು ಎಂದು ಕಾಂಗ್ರೆಸ್‌ ಶುಕ್ರವಾರವಷ್ಟೇ ಆಯೋಗಕ್ಕೆ ದೂರು ಸಲ್ಲಿಸಿತ್ತು.