ಶೀಘ್ರ ಮತದಾರರ ಚೀಟಿ ಜತೆ ಆಧಾರ್‌ ಜೋಡಣೆ

| Published : Mar 19 2025, 12:32 AM IST

ಸಾರಾಂಶ

: ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಆದರೆ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದಂತೆ ಇದನ್ನು ಕಡ್ಡಾಯ ಮಾಡುವ ಬದಲು ಐಚ್ಛಿಕ ಮಾಡುವ ಸಾಧ್ಯತೆ ಇದೆ.

ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಆದರೆ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದಂತೆ ಇದನ್ನು ಕಡ್ಡಾಯ ಮಾಡುವ ಬದಲು ಐಚ್ಛಿಕ ಮಾಡುವ ಸಾಧ್ಯತೆ ಇದೆ.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಜೊತೆ ಮಂಗಳವಾರ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ಬಳಿಕ ಈ ಮಾಹಿತಿ ನೀಡಿದೆ.

ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡುವ ಕುರಿತಂತೆ ಆಧಾರ್‌ ಕಾರ್ಡ್‌ ವಿತರಿಸುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ ಜೊತೆಗೆ ತಾಂತ್ರಿಕ ಸಮಾಲೋಚನೆ ಆರಂಭಿಸಲಾಗುವುದು. ಜೋಡಣೆ ಕಾರ್ಯವನ್ನು ದೇಶದ ಕಾನೂನು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನುಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಈ ಕುರಿತು ಹೇಳಿಕೆ ಹೇಳಿಕೆ ಬಿಡುಗಡೆ ಮಾಡಿರುವ ಆಯೋಗ, ‘ಸಂವಿಧಾನದ 326ನೇ ವಿಧಿಯ ಪ್ರಕಾರ ಭಾರತದ ಪ್ರಜೆಗಳಿಗಷ್ಟೇ ಮತದಾನದ ಹಕ್ಕಿದೆ. ಆಧಾರ್‌ ವ್ಯಕ್ತಿಗಳ ಗುರುತನ್ನು ಸ್ಥಾಪಿಸುವ ಕಾರಣ ಅದನ್ನು ಜನಪ್ರತಿನಿಧಿ ಕಾಯ್ದೆ 1950ಯ ಸೆಕ್ಷನ್‌ 23(4), 23(5),ತು 23(6) ಮತ್ತು ಸುಪ್ರೀಂ ಕೋರ್ಟ್‌ನ 2023ರ ತೀರ್ಪಿನ ಅನುಸಾರ ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ’ ಎಂದು ಅದರಲ್ಲಿ ತಿಳಿಸಲಾಗಿದೆ.

2023ರ ಏಪ್ರಿಲ್‌ನಲ್ಲಿ, ‘ಆಧಾರ್‌ ಹಾಗೂ ಮತದಾರರ ಚೀಟಿ ಜೋಡಣೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಲ್ಲ. ಈ ಜೋಡಣೆಯಾಗದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ’ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿತ್ತು.