ಪಡಿತರ ಹಗರಣ: ಬಂಗಾಳದ ಸಚಿವ ಮಲಿಕ್‌ ಬಂಧನ

| Published : Oct 28 2023, 01:15 AM IST

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ಮೌಲ್ಯದ ಪಡಿತರ ಹಗರಣ ಸಂಬಂಧ ಸಚಿವ ಜ್ಯೋತಿಪ್ರಿಯೋ ಮಲಿಕ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
18 ಗಂಟೆ ವಿಚಾರಣೆ ಬಳಿಕ ಬಂಧಿಸಿದ ಇ.ಡಿ ಕೋವಿಡ್‌ ವೇಳೆಯ ಪಡಿತರ ಅಕ್ಕಿ ಗೋಲ್‌ಮಾಲ್‌ ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ಮೌಲ್ಯದ ಪಡಿತರ ಹಗರಣ ಸಂಬಂಧ ಸಚಿವ ಜ್ಯೋತಿಪ್ರಿಯೋ ಮಲಿಕ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಇದರೊಂದಿಗೆ ಟಿಎಂಸಿ ಜನಪ್ರತಿನಿಧಿಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ ಮತ್ತಷ್ಟು ವಿಸ್ತಾರಗೊಂಡಂತಾಗಿದೆ. ಗುರುವಾರ ಮಲಿಕ್‌ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸತತ 18 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ. ಮನೆಯಲ್ಲಿ ವಿಚಾರಣೆ ನಡೆಸಿ ಬಂಧಿಸಿದ ಬಳಿಕ ಬೆಳಗಿನ ಜಾವ 3.30ರ ವೇಳೆಗೆ ಮಲ್ಲಿಕ್‌ ಅವರನ್ನು ಇ.ಡಿ. ಕಚೇರಿಗೆ ರೆದೊಯ್ಯಲಾಯಿತು. ಏನಿದು ಹಗರಣ?: 2011ರಿಂದ 2021ರವರೆಗೆ ಮಲಿಕ್‌ ಬಂಗಾಳದ ಆಹಾರ ಮತ್ತು ಪಡಿತರ ಖಾತೆ ಸಚಿವರಾಗಿದ್ದರು. ಈ ಅವಧಿಯಲ್ಲಿ ಮತ್ತು ಕೋವಿಡ್‌ ಅವಧಿಯಲ್ಲಿ ಪಡಿತರ ಯೋಜನೆ ಮೂಲಕ ವಿತರಿಸಬೇಕಿದ್ದ ಭಾರೀ ಪ್ರಮಾಣದ ಅಕ್ಕಿ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಭಾರೀ ಗೋಲ್‌ಮಾಲ್‌ ನಡೆಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸಿದ ಇ.ಡಿ. ಇದೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಮಲಿಕ್‌ರನ್ನು ಬಂಧಿಸಿದೆ. ಸುವೇಂದು, ಬಿಜೆಪಿ ಸಂಚು- ಮಲಿಕ್‌: ಈ ನಡುವೆ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಮಲಿಕ್‌, ‘ಇದು ಬಿಜೆಪಿ ಮತ್ತು ಅದರ ನಾಯಕ ಸುವೇಂದು ಅಧಿಕಾರಿ ಅವರ ಸಂಚು. ನಾನು ದೊಡ್ಡ ಸಂಚಿನ ಸಂತ್ರಸ್ತನಾಗಿದ್ದೇನೆ’ ಎಂದಿದ್ದಾರೆ.