ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾದ ಬಳಿಕವೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ನೇರವಾಗಿ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

ನವದೆಹಲಿ: ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾದ ಬಳಿಕವೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ನೇರವಾಗಿ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಒಂದು ವೇಳೆ, ಆ ವ್ಯಕ್ತಿ ತನ್ನ ವಶಕ್ಕೆ ಬೇಕು ಎಂದಾದಲ್ಲಿ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಮೊರೆ ಹೋಗಬೇಕಾಗುತ್ತದೆ ಎಂದು ಪ್ರಕರಣವೊಂದರಲ್ಲಿ ನ್ಯಾಯಾಲಯ ತಾಕೀತು ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 44ರಡಿ ದಾಖಲಾದ ದೂರಿನ ಮೇರೆಗೆ ಸೆಕ್ಷನ್‌ 4ರಡಿ ದಂಡನೆ ನೀಡಲು ನ್ಯಾಯಾಲಯ ಪರಿಗಣಿಸಿರುವಾಗ ಇ.ಡಿ ಹಾಗೂ ಅದರ ಅಧಿಕಾರಿಗಳು ದೂರಿನಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ವ್ಯಕ್ತಿಯನ್ನು ಬಂಧಿಸುವ ಸಂಬಂಧ ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌. ಓಕಾ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ ಹೇಳಿದೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸಕಾರಣಗಳನ್ನು ದಾಖಲಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಬೇಕು. ಒಂದು ವೇಳೆ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂದು ತೃಪ್ತವಾದರೆ ಮಾತ್ರ ನ್ಯಾಯಾಲಯ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ಸೂಚಿಸಬಹುದು ಎಂದು ಹೇಳಿದೆ.

ಒಂದು ವೇಳೆ, ಅದೇ ಪ್ರಕರಣದಲ್ಲಿ ತನಿಖೆಯನ್ನು ನಡೆಸಬೇಕು ಎಂದು ಇ.ಡಿ. ಬಯಸಿದರೆ, ದೂರಿನಲ್ಲಿ ಆರೋಪಿ ಎಂದು ನಮೂದಾಗದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಬಹುದು ಎಂದು ಹೇಳಿದೆ.