ಸಾರಾಂಶ
ನವದೆಹಲಿ: 2005-06ರಲ್ಲಿ ಹರ್ಯಾಣದಲ್ಲಿ ನಡೆದ ಭೂ ಖರೀದಿ ವ್ಯವವಾರವೊಂದರಲ್ಲಿ ಸಂಬಂಧ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಸೋನಿಯಾರ ಪುತ್ರಿ ಪ್ರಿಯಾಂಕಾ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರ ಸಂಬಂಧ ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯೊಂದರಲ್ಲಿ ಪ್ರಿಯಾಂಕಾ ಹೆಸರನ್ನು ಉಲ್ಲೇಖಿಸಲಾಗಿದೆ. ಈ ತನಿಖಾ ಸಂಸ್ಥೆಯ ಚಾರ್ಜ್‌ಶೀಟ್‌ವೊಂದರಲ್ಲಿ ಪ್ರಿಯಾಂಕಾ ಹೆಸರು ಪ್ರಸ್ತಾಪ ಇದೇ ಮೊದಲು.ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿಗೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಅವರ ಹೆಸರನ್ನು ಇ.ಡಿ. ಪ್ರಸ್ತಾಪಿಸಿತ್ತು. ಇದೀಗ ಭಂಡಾರಿ ಆಪ್ತರಿಗೆ ಸಂಬಂಧಿಸಿದ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ, ವಾದ್ರಾ ಇಬ್ಬರ ಹೆಸರನ್ನೂ ಉಲ್ಲೇಖಿಸಲಾಗಿದೆ. ಆದರೆ ಇಬ್ಬರನ್ನೂ ಆರೋಪಿಗಳಾಗಿ ಪರಿಗಣಿಸಿಲ್ಲ.ಯಾವುದಿದು ಕೇಸ್?:ಎನ್‌ಆರ್‌ಐ ಉದ್ಯಮಿ ಸಿ.ಸಿ.ಥಂಪಿ ಹಾಗೂ ಸಂಜಯ್ ಭಂಡಾರಿ ಬಂಧು ಸುಮೀತ್ ಛಡ್ಡಾ ವಿರುದ್ಧ ಇ.ಡಿ. ಕಳೆದ ನವೆಂಬರ್‌ನಲ್ಲಿ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದೆ. ಈ ಥಂಪಿ ಜತೆ ರಾಬರ್ಟ್ ವಾದ್ರಾ ನಂಟು ಹೊಂದಿದ್ದಾರೆ. ದೆಹಲಿಯ ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯಕ್ಕೆ ಡಿ.22ರಂದು ಈ ಆರೋಪಪಟ್ಟಿಯನ್ನು ಸಲ್ಲಿಸಲಾಗಿದ್ದು, ಅದರಲ್ಲಿ ವಾದ್ರಾ ದಂಪತಿ ಹೆಸರು ಇದೆ.ದಂಪತಿ ಬಗ್ಗೆ ಉಲ್ಲೇಖ ಏನಿದೆ?:2015ರಲ್ಲಿ 67 ವರ್ಷದ ಥಂಪಿ ವಿರುದ್ಧ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆ ಪ್ರಕರಣದ ಪರಿಶೀಲನೆ ವೇಳೆ ವಾದ್ರಾ ದಂಪತಿಯ ಭೂಮಿ ಖರೀದಿ, ಮಾರಾಟ ವ್ಯವಹಾರ ಪತ್ತೆಯಾಗಿದೆ. ಅಲ್ಲದೆ ವಾದ್ರಾ ಹಾಗೂ ಥಂಪಿ ನಡುವೆ ಗಾಢವಾದ ನಂಟು ಇದೆ ಎಂದು ಇ.ಡಿ. ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.2005-2008ರ ನಡುವಣ ಅವಧಿಯಲ್ಲಿ ಹರ್ಯಾಣದ ಫರೀದಾಬಾದ್ ಜಿಲ್ಲೆಯ ಅಮೀರ್‌ಪುರ ಗ್ರಾಮದಲ್ಲಿ ಥಂಪಿ 486 ಎಕರೆ ಜಮೀನನ್ನು ದೆಹಲಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಎಚ್.ಎಲ್.ಪಾಹ್ವಾರಿಂದ ಖರೀದಿಸಿದ್ದ. ಗಮನಾರ್ಹ ಎಂದರೆ, 2005-06ರ ಅವಧಿಯಲ್ಲಿ ವಾದ್ರಾ ಕೂಡ ಅದೇ ಪಾಹ್ವಾ ಅವರಿಂದ ಅಮೀರ್‌ಪುರದಲ್ಲಿ ಮೂರು ಕಡೆ ಒಟ್ಟು 40.08 ಎಕರೆ ಜಾಗ ಖರೀದಿಸಿದ್ದರು. 2010ರಲ್ಲಿ ಆ ಜಾಗವನ್ನು ಪಾಹ್ವಾ ಅವರಿಗೆ ಮಾರಾಟ ಮಾಡಿದ್ದರು ಎಂದು ಆರೋಪಪಟ್ಟಿ ಹೇಳುತ್ತದೆ.ವಾದ್ರಾ ಪತ್ನಿಯಾಗಿರುವ ಪ್ರಿಯಾಂಕಾ ಕೂಡ ಅಮೀರ್‌ಪುರ ಗ್ರಾಮದಲ್ಲೇ 5 ಎಕರೆ ಜಾಗವನ್ನು 2006ರ ಏಪ್ರಿಲ್‌ನಲ್ಲಿ ಖರೀದಿಸಿ, 2010ರ ಫೆಬ್ರವರಿಯಲ್ಲಿ ಪಾಹ್ವಾ ಅವರಿಗೆ ಮಾರಾಟ ಮಾಡಿದ್ದರು. ಜಮೀನು ಖರೀದಿಗೆ ಬಳಸಿದ್ದ ಹಣವನ್ನು ಪಾಹ್ವಾ ತಮ್ಮ ಲೆಕ್ಕಪತ್ರಗಳಲ್ಲಿ ತೋರಿಸಿಲ್ಲ. ಹಾಗೆಯೇ ಪಾಹ್ವಾ ಅವರಿಂದ ಜಮೀನು ಖರೀದಿಸುವಾಗ ಪೂರ್ಣ ಹಣವನ್ನು ವಾದ್ರಾ ಪಾವತಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ. ತಿಳಿಸಿದೆ.