ಸಾರಾಂಶ
ನವದೆಹಲಿ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಬ್ರಿಟಿಷ್ ಬ್ರಾಡಕಾಸ್ಟಿಂಗ್ ಕಾರ್ಪೋರೆಷನ್ (ಬಿಬಿಸಿ) ಭಾರತೀಯ ಘಟಕಕ್ಕೆ ಜಾರಿ ನಿರ್ದೇಶನಾಲಯ 3.44 ಕೋಟಿ ರು. ದಂಡ ವಿಧಿಸಿದೆ.
ವಿದೇಶಿ ಹೂಡಿಕೆ ಮಿತಿ ಶೇ.26 ಮೀರಕೂಡದು ಎಂಬ ನಿಯಮ ಇದ್ದರೂ ಶೇ.100ರಷ್ಟು ಎಫ್‌ಡಿಐ ಮೇಲೆ ಕಂಪನಿ ನಡೆಯುತ್ತಿತ್ತು. ಇದು ಎಫ್‌ಡಿಐ ನಿಯಮದ ಸ್ಪಷ್ಟ ಉಲ್ಲಂಘನೆ ಎಂದಿರುವ ಜಾರಿ ನಿರ್ದೇಶನಾಲಯ, ಅದರ 3 ನಿರ್ದೇಶಕರಿಗೂ 1.44 ಕೋಟಿ ರು. ದಂಡ ವಿಧಿಸಿದೆ. ಕೆಲವು ವರ್ಷಗಳಿಂದ ಭಾರತದಲ್ಲಿ ಬಿಬಿಸಿ-ಕೇಂದ್ರ ಸರ್ಕಾರ ನಡುವೆ ಸಂಘರ್ಷ ನಡೆದಿದೆ.
ಈಶ ಫೌಂಡೇಶನ್ ಶಿವರಾತ್ರಿ ಉತ್ಸವದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ
ಚೆನ್ನೈ: ಫೆ.26ರಂದು ಕೊಯಮತ್ತೂರಿನಲ್ಲಿ ನಡೆಯಲಿರುವ ಮಹಾಶಿವರಾತ್ರಿ ಸಮಾರಂಭದಲ್ಲಿ ಈಶ ಫೌಂಡೇಶನ್ ನಿಯಮಗಳನ್ನು ಪಾಲಿಸುತ್ತಿದೆಯೇ ಎಂದು ಪರಿಶೀಲಿಸುವಂತೆ ಮತ್ತು ಈ ಕುರಿತು ಫೆ.24ರಂದು ವರದಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ (ಟಿಎನ್‌ಪಿಸಿಬಿ) ನಿರ್ದೇಶನ ನೀಡಿದೆ.
ಪ್ರತಿವರ್ಷ ಶಿವರಾತ್ರಿಯಂದು ಈಶ ಫೌಂಡೇಶನ್ ವತಿಯಿಂದ ಉತ್ಸವ ನಡೆಸಲಾಗುತ್ತದೆ. ಆದರೆ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದರಿಂದ ಅಪಾರ ಮಾಲಿನ್ಯ ಉಂಟಾಗುತ್ತಿದೆ. ಹಾಗಾಗಿ ಈ ವರ್ಷ ಉತ್ಸವ ನಡೆಸಲು ಅನುಮತಿ ನೀಡಬಾರದು ಎಂದು ವಿನಂತಿಸಿ ಎಸ್.ಟಿ. ಶಿವಜ್ಞಾನಂ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ಪರಿಶೀಲಿಸಿದ ನ್ಯಾ.ಎಸ್.ಎಂ.ಶಿವಸುಬ್ರಹ್ಮಣ್ಯಂ ಹಾಗೂ ನ್ಯಾ.ಕೆ. ರಾಜಶೇಖರ್ ಅವರಿದ್ದ ಪೀಠ ಟಿಎನ್‌ಪಿಸಿಬಿಗೆ ನಿರ್ದೇಶನ ನೀಡಿದೆ.
ಅಪರಿಚಿತ ಸ್ತ್ರೀ ಸೌ0ದರ್ಯ ವರ್ಣಿಸಿ ಮೆಸೇಜ್ ರವಾನೆ ‘ಅಶ್ಲೀಲತೆ’: ಕೋರ್ಟ್
ಮುಂಬೈ: ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ‘ನೀನು ತೆಳ್ಳಗೆ, ಬೆಳ್ಳಗೆ ಸುಂದರವಾಗಿದ್ದೀಯ. ನನಗೆ ನೀನು ಇಷ್ಟ’ ಎಂಬಂತಹ ಸಂದೇಶಗಳನ್ನು ಕಳುಹಿಸುವುದು ಅಶ್ಲೀಲತೆ ಎಂದು ಇಲ್ಲಿನ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಮಾಜಿ ಕಾರ್ಪೊರೇಟರ್ ಒಬ್ಬರಿಗೆ ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ಸೌಂದರ್ಯ ವರ್ಣನೆಯ ಸಂದೇಶಗಳನ್ನು ಕಳುಹಿಸಿದ್ದ. ಆ ಪ್ರಕರಣ ಸಂಬಂಧ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ. ಜಿ. ಧೋಬ್ಲೆ, ‘ಯಾವುದೇ ವಿವಾಹಿತ ಮಹಿಳೆ ಅಥವಾ ಅವರ ಪತಿ ಅಂತಹ ವಾಟ್ಸಾಪ್ ಸಂದೇಶ ಮತ್ತು ಅಶ್ಲೀಲ ಫೋಟೋಗಳನ್ನು ಸಹಿಸುವುದಿಲ್ಲ. ಅಂಥ ಸಂದೇಶಗಳು ಮಹಿಳೆಗೆ ಮಾಡಿದ ಅವಮಾನ’ ಎಂದರು.
ಅಲ್ಲದೆ, ಈ ಹಿಂದೆ ವಿಚಾರಣಾ ನ್ಯಾಯಾಲಯ ಅಪರಾಧಿಗೆ ವಿಧಿಸಿದ್ದ 3 ತಿಂಗಳ ಜೈಲುಶಿಕ್ಷೆಯನ್ನೂ ಕೋರ್ಟ್ ತ್ತಿಹಿಡಿಯಿತು.
ವಿಕಿಪಿಡಿಯಾದಲ್ಲಿ ಸಂಭಾಜಿ ಮಹಾರಾಜರ ಬಗ್ಗೆ ಅವಹೇಳನ ಬರಹ: ನಾಲ್ವರ ವಿರುದ್ಧ ಕೇಸ್
ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಕುರಿತು ವಿಕಿಪಿಡಿಯಾದಲ್ಲಿ ಅವಹೇಳನಕಾರಿ ಬರಹ ಬರೆದಿದ್ದಲ್ಲದೆ, ಅದನ್ನು ಪೊಲೀಸರ ಸೂಚನೆ ಬಳಿಕವೂ ತೆಗೆಯದ ಕಾರಣ ನಾಲ್ವರು ಬರಹಗಾರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಅಮೆರಿಕ ಮೂಲದ ವಿಕಿಪಿಡಿಯಾ ವೆಬ್‌ಸೈಟ್‌ನಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಕುರಿತು ಅವಹೇಳನಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ, ‘ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಕೂಡಲೇ ಬರಹ ತೆಗೆದುಹಾಕಬೇಕು’ ಎಂದು ಮಹಾರಾಷ್ಟ್ರ ಪೊಲೀಸರು ವಿಕಿಪಿಡಿಯಾಗೆ ನೋಟಿಸ್ ನೀಡಿದ್ದರು. ಆದರೆ ಇದಕ್ಕೆ ವಿಕಿಪಿಡಿಯಾ ಸ್ಪಂದಿಸದ ಕಾರಣ ನಾಲ್ವರು ಬರಹಗಾರರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಔರಂಗಜೇಬ್ ಸಮಾಧಿಗೆ ಬುಲ್ಡೋಜರ್: ಬಿಜೆಪಿ ಶಾಸಕ ಆಗ್ರಹ
ಹೈದರಾಬಾದ್: ‘ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಮುಘಲ್ ಅರಸ ಔರಂಗಜೇಬನ ಸಮಾಧಿ ಮೇಲೆ ಬುಲ್ಡೋಜರ್ ಓಡಿಸಬೇಕು’ ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ‘ಛತ್ರಪತಿ ಸಂಭಾಜಿ ಮಹಾರಾಜರನ್ನು ಚಿತ್ರಹಿಂಸೆ ನೀಡಿ ಕೊಂದ ಔರಂಗಜೇಬನ ಸಮಾಧಿ ಇನ್ನೂ ಮಹಾರಾಷ್ಟ್ರದಲ್ಲಿ ಏಕೆ ಇದೆ? ಔರಂಗಾಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ ಎಂದು ಬದಲಿಸಿದರೂ, ಔರಂಗಾಬಾದ್ ವಿಮಾನ ನಿಲ್ದಾಣಕ್ಕೆ ಸ್ವಾಗತ ಎಂಬ ಫಲಕ ಏಕಿದೆ? ಔರಂಗಜೇಬನ ಪ್ರತಿ ಕುರುಹು ಅಳಿಸಿ. ಇದು ಹಿಂದೂಗಳ ಬೇಡಿಕೆ ಮಾತ್ರವಲ್ಲ. ಇಡೀ ಭಾರತದ ಬೇಡಿಕೆ’ ಎಂದರು.