ಅಕ್ರಮ ಹಣ ವರ್ಗಾವಣೆ ಪ್ರಕರಣ : ತೆಲಂಗಾಣ ಮಾಜಿ ಸಿಎಂ ಪುತ್ರ ರಾಮ್‌ರಾವ್‌ಗೆ ಇ.ಡಿ. ಸಮನ್ಸ್‌

| Published : Dec 29 2024, 01:15 AM IST / Updated: Dec 29 2024, 04:39 AM IST

ಸಾರಾಂಶ

ಹೈದರಾಬಾದ್‌ ಫಾರ್ಮುಲ - ಇ ರೇಸ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್‌ ಪಕ್ಷದ ನಾಯಕ ಕೆ.ಟಿ.ರಾಮರಾವ್‌ ಹಾಗೂ ಇತರ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶಾನಲಯ ಸಮನ್ಸ್‌ ಜಾರಿ ಮಾಡಿದೆ.

ಹೈದರಾಬಾದ್‌: ಹೈದರಾಬಾದ್‌ ಫಾರ್ಮುಲ - ಇ ರೇಸ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್‌ ಪಕ್ಷದ ನಾಯಕ ಕೆ.ಟಿ.ರಾಮರಾವ್‌ ಹಾಗೂ ಇತರ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶಾನಲಯ ಸಮನ್ಸ್‌ ಜಾರಿ ಮಾಡಿದೆ.

ತೆಲಂಗಾಣದ ಎಸಿಬಿಯಲ್ಲಿ ದಾಖಲಿಸಲಾಗಿದ್ದ ದೂರಿನ ಆಧಾರದ ಮೇಲೆ ಕಳೆದ ವಾರ ಕೆಟಿಆರ್‌ ವಿರುದ್ಧ ಇ.ಡಿ. ಎಫ್‌ಐಆರ್‌ ದಾಖಲಿಸಿತ್ತು. ಈ ಸಂಬಂಧ ಬಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕೆಸಿಆರ್‌ ಪುತ್ರ ಕೆಟಿಆರ್‌ಗೆ ಜ.7ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಸಮನ್ಸ್‌ ನೀಡಿದ್ದಾರೆ.

2023ರಲ್ಲಿ ಬಿಆರ್‌ಎಸ್‌ ಪಕ್ಷ ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದಾಗ ಹೈದರಾಬಾದ್‌ನಲ್ಲಿ ಫಾರ್ಮುಲ - ಇ ರೇಸ್‌ ನಡೆಸಲು ಅನುಮತಿ ಇಲ್ಲದೆ 55 ಕೋಟಿ ರು. ಪಾವತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಕೆಟಿಆರ್‌ ಜೊತೆಗೆ ಹಿರಿಯ ಐಎಎಸ್‌ ಅಧಿಕಾರಿ ಅರವಿಂದ್‌ ಕುಮಾರ್‌, ಹೈದರಾಬಾದ್‌ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧಿಕಾರಿ ಬಿಎಲ್‌ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜ.2, 3ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ.

ದೆಹಲಿ ಮಾದರಿ ಮಹಾರಾಷ್ಟ್ರದಲ್ಲೂ ಬಾಂಗ್ಲನ್ನರ ಪತ್ತೆಗೆ ಕಾರ್ಯಾಚರಣೆ

ಮುಂಬೈ: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಅಕ್ರಮ ವಲಸಿಗರ ಪತ್ತೆಗೆ ದೆಹಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿರುವ ನಡುವೆಯೇ, ಇತ್ತ ಮಹಾರಾಷ್ಟ್ರ ಸರ್ಕಾರ ಕೂಡಾ ಅದೇ ರೀತಿಯ ಕಾರ್ಯಾಚರಣೆ ಆರಂಭಿಸಿದೆ. ಶುಕ್ರವಾರ ನಡೆದ ಇಂಥದ್ದೇ ಕಾರ್ಯಾಚರಣೆಯಲ್ಲಿ, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 13 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಆಘಾತಕಾರಿ ವಿಷಯವೆಂದರೆ ಹೀಗೆ ಬಂಧನಕ್ಕೆ ಒಳಗಾದ ಎಲ್ಲಾ 13 ಜನರ ಬಳಿಯೂ ಭಾರತ ಸರ್ಕಾರ ನೀಡುವ ಆಧಾರ್‌ ಕಾರ್ಡ್‌ ಪತ್ತೆಯಾಗಿದೆ. ಇವರೆಲ್ಲಾ ನಕಲಿ ದಾಖಲೆಗಳನ್ನು ಸಲ್ಲಿಸಿ ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.ಇತ್ತೀಚೆಗಷ್ಟೇ ನವಿ ಮುಂಬೈ, ಥಾಣೆ, ನಾಸಿಕ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ, ಅಕ್ರಮವಾಗಿ ಭಾರತದಲ್ಲಿ ವಾಸ ಮಾಡುತ್ತಿದ್ದ 17 ಬಾಂಗ್ಲಾ ಪ್ರಜೆಗಳನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆ 13 ಜನರ ಬಂಧನವಾಗಿದೆ. ಬಂಧಿತರು ಭೋಕರ್ದನ್‌ ತಾಲೂಕಿನಲ್ಲಿ ಕ್ರಷರ್‌ ಮಷಿನ್‌ನ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಬಂಧಿತರ ವಿರುದದ್ಧ ವಿದೇಶಿಗರ ಕಾಯ್ದೆ ಸೇರಿ ಮೂರು ಕಾಯ್ದೆಗಳಡಿ ಬಂಧಿತರ ಮೇಲೆ ಕೇಸ್‌ ದಾಖಲಿಸಲಾಗಿದೆ.