ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌

| N/A | Published : Aug 05 2025, 01:30 AM IST / Updated: Aug 05 2025, 04:21 AM IST

Kamal Hassan
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಸರ್ವಾಧಿಕಾರ ಮತ್ತು ಸನಾತನ (ಧರ್ಮ)ದ ಕೊಂಡಿಯನ್ನು ಕಳಚಲು ಶಕ್ತವಾಗಿರುವ ಏಕೈಕ ಶಕ್ತಿಯೆಂದರೆ ಅದು ಶಿಕ್ಷಣ’ ಎಂದು ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ, ನಟ ಕಮಲ್‌ ಹಾಸನ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

  ಚೆನ್ನೈ :  ‘ಸರ್ವಾಧಿಕಾರ ಮತ್ತು ಸನಾತನ (ಧರ್ಮ)ದ ಕೊಂಡಿಯನ್ನು ಕಳಚಲು ಶಕ್ತವಾಗಿರುವ ಏಕೈಕ ಶಕ್ತಿಯೆಂದರೆ ಅದು ಶಿಕ್ಷಣ’ ಎಂದು ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ, ನಟ ಕಮಲ್‌ ಹಾಸನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ, ಈ ಹಿಂದೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ನಿರ್ಮೂಲನೆಗೆ ನೀಡಿದ್ದ ಕರೆಯನ್ನು ನೆನಪಿಸಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕಮಲ್‌ಹಾಸನ್‌ರ ಈ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಧರ್ಮದ ಆಧಾರದಲ್ಲಿ ಜನರ ವಿಭಜನೆಗೆ ಕಮಲ್‌ ಮುಂದಾಗಿದ್ದಾರೆ ಎಂದು ಆರೋಪಿಸಿದೆ.

ಏನಿದು ವಿವಾದ?:

ನಟ ಸೂರ್ಯ ಅವರ ಅಗರಂ ಫೌಂಡೇಷನ್‌ನ 15ನೇ ವಾರ್ಷಿಕೋತ್ಸವದಂದು ಮಾತನಾಡಿದ ಕಮಲ್‌, ‘ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನೀಟ್‌ ಪರೀಕ್ಷೆಯು 2017ರಿಂದ ಎಷ್ಟೋ ಮಕ್ಕಳನ್ನು ವಿದ್ಯಾಭ್ಯಾಸದಿಂದ ದೂರವಿಟ್ಟಿದೆ. ಇದನ್ನು ಮತ್ತು ಸನಾತನದ ಕೊಂಡಿಯನ್ನು ತೊಲಗಿಸಲು ಅಗರಂ ಕೂಡ ಏನೂ ಮಾಡಲಾಗದು. ಆದರೆ ಶಿಕ್ಷಣವು ಕಾನೂನನ್ನು ಬದಲಿಸುವ ಶಕ್ತಿ ಕೊಡುತ್ತದೆ. ಅದು ಕೇವಲ ಅಸ್ತ್ರವಲ್ಲ, ಯುದ್ಧ. ರಾಷ್ಟ್ರದ ಭವಿಷ್ಯವನ್ನು ಕೆತ್ತಬಲ್ಲ ಉಳಿ’ ಎಂದು ಬಣ್ಣಿಸಿದರು.  

ಜತೆಗೆ, ‘ಶಿಕ್ಷಣವನ್ನು ಹೊರತುಪಡಿಸಿ ಬೇರೆ ಯಾವ ವಿಧಾನವನ್ನು ಕೈಗೆತ್ತಿಕೊಂಡರೂ ಫಲವಿಲ್ಲ. ಅದರಲ್ಲಿ ನಿಮಗೆ ಗೆಲುವು ಸಿಗದು. ಏಕೆಂದರೆ ಬಹುಸಂಖ್ಯಾತರು ನಿಮ್ಮನ್ನು ಸೋಲಿಸುತ್ತಾರೆ ’ ಎಂದು ಕಿವಿಮಾತು ಹೇಳಿದರು.ಈ ಮೊದಲು ಸಹ ಕಮಲ್‌ ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ‘ಬೇರೆ ಧರ್ಮಗಳಿಗೆ ಹೋಲಿಸಿದರೆ ಹಿಂದೂ ದೇವರುಗಳು ಸಹಾನುಭೂತಿ ಹೀನರು’ ಎಂದಿದ್ದರು. ಅಂತೆಯೇ, ಕೆಲ ದೇವತೆಗಳ ವಸ್ತ್ರದ ಬಗ್ಗೆ ಅಪಮಾನಕರ ಹೇಳಿಕೆ ನೀಡಿದ್ದ ಕಮಲ್‌, ‘ದ್ರೌಪದಿಯ ಒಪ್ಪಿಗೆಯಿಲ್ಲದೆ ಪಣಕ್ಕಿಡುವ ಕತೆಯುಳ್ಳ ಮಹಾಭಾರತವನ್ನು ಸಮಾಜ ಏಕೆ ಗೌರವಿಸುತ್ತದೆ?’ ಎಂದು ಪ್ರಶ್ನಿಸಿದ್ದರು. 

ಬಿಜೆಪಿ ತಿರುಗೇಟು:ಶಿಕ್ಷಣದ ಶಕ್ತಿಯನ್ನು ವಿವರಿಸುತ್ತ ಸನಾತನ ಧರ್ಮದ ವಿರುದ್ಧ ಮಾತನಾಡಿದ ಕಮಲ್‌ ಅವರಿಗೆ ಬಿಜೆಪಿ ನಾಯಕಿ ತಮಿಳ್‌ಸಾಯ್‌ ಸೌಂದರ್ಯರಾಜನ್‌ ತಿರುಗೇಟು ನೀಡಿದ್ದು, ‘ಅವರು ತಮ್ಮ ಪಕ್ಷಕ್ಕಿಂತ ಡಿಎಂಕೆಗೆ ನಿಷ್ಠರಾಗಿರುವಂತಿದೆ. ಮೊದಲು ಭಾಷಾ ಸಮಸ್ಯೆಯನ್ನು ಎತ್ತಿ, ವಿವಿಧ ರಾಜ್ಯಗಳ ಜನರನ್ನು ವಿಭಜಿಸಿದರು. ಈಗ, ಧಾರ್ಮಿಕ ಭಾವನೆಗಳ ಆಧಾರದಲ್ಲಿ ಜನರನ್ನು ಒಡೆಯಲು ಧಾರ್ಮಿಕ ವಿಷಯವನ್ನು ಎತ್ತುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಚಿತ್ರ ನಟ ಹೇಳಿದ್ದೇನು?

- ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಿಂದಾಗಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ

- ವೈದ್ಯ ವಿದ್ಯಾಭ್ಯಾಸದಿಂದಲೇ ದೂರವಾಗಿದ್ದಾರೆ. ಇದನ್ನು ಹಾಗೂ ಸನಾತನ ಕೊಂಡಿಯನ್ನು ತೊಲಗಿಸಬೇಕು

- ಶಿಕ್ಷಣ ಎಂಬುದು ಇದಕ್ಕೆ ಅಸ್ತ್ರ, ಯುದ್ಧ. ರಾಷ್ಟ್ರದ ಭವಿಷ್ಯವನ್ನು ಕೆತ್ತಬಲ್ಲ ಉಳಿ ಎಂದರೆ ಅದುವೇ ಶಿಕ್ಷಣ

- ಶಿಕ್ಷಣ ಹೊರತುಪಡಿಸಿ ಬೇರಾವ ವಿಧಾನ ಕೈಗೆತ್ತಿಕೊಂಡರೂ ಫಲವಿಲ್ಲ. ಅದರಿಂದ ಗೆಲುವು ಕೂಡ ಸಿಗದು

- ಬಹುಸಂಖ್ಯಾತರು ನಿಮ್ಮನ್ನು ಸೋಲಿಸಿಬಿಡುತ್ತಾರೆ : ನಟ ಸೂರ್ಯ ಫೌಂಡೇಷನ್‌ ಕಾರ್‍ಯಕ್ರಮದಲ್ಲಿ ಹೇಳಿಕೆ

Read more Articles on