ಸಾರಾಂಶ
ನಾಸಿಕ್: ಮುಂಬರುವ ಜನಗಣತಿ ಸಮಯದಲ್ಲಿ ದೇಶವ್ಯಾಪಿ ಜಾತಿ ಗಣತಿಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜಾತಿ, ಸಮುದಾಯದ ಹೆಸರಲ್ಲಿ ಕಾಂಗ್ರೆಸ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಹೀಗಾಗಿ ‘ಏಕ್ ಹೈ ತೋ ಸೇಫ್ ಹೈ’ (ಒಂದಾಗಿದ್ದರಷ್ಟೇ ಸುರಕ್ಷಿತ) ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ‘ನೆಹರು ಕಾಲದಿಂದ ಮೀಸಲು ವಿರೋಧಿ ಧೋರಣೆ ತಳೆದಿರುವ ಕಾಂಗ್ರೆಸ್, ಒಂದು ಜಾತಿಯನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುತ್ತಲೇ ಬರುತ್ತಿದೆ. ಅವರು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಪ್ರಗತಿ ಹೊಂದುವುದನ್ನು ಬಯಸುವುದಿಲ್ಲ.
ಇದು ಕಾಂಗ್ರೆಸ್‌ನ ಅಜೆಂಡಾ. ಆದರೆ ನೆನಪಿಡಿ, ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ (ಏಕ್ ಹೈ ತೋ ಸೇಫ್ ಹೈ). ನಾವು ಒಂದಾಗಿದ್ದರೆ ಕಾಂಗ್ರೆಸ್‌ನ ರಾಜಕಾರಣ ಅಂತ್ಯವಾಗುತ್ತದೆ’ ಎಂದು ಮೋದಿ, ಜಾತಿ ಗಣತಿಯನ್ನು ಬೆಂಬಲಿಸುವ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಕ್ ಪ್ರಹಾರ ನಡೆಸಿದ್ದಾರೆ.
ವಿಶೇಷವೆಂದರೆ ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ‘ಬಾಟೇಂಗೇ ತೋ ಕಾಟೇಂಗೆ’ (ಒಗ್ಗಟ್ಟು ಇಲ್ಲದಿದ್ದರೆ ನಾಶ) ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಇದೀಗ ಮೋದಿ ಏಕ್ ಹೈ ತೋ ಸೇಫ್ ಹೈ ಎಂಬ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ತಿರುಗೇಟು:ಈ ನಡುವೆ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಜಾಗಕ್ಕೆ ಮನುಸ್ಮೃತಿಯನ್ನು ತರಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಯಸಿದ್ದು, ಆದಕಾರಣವೇ ಜಾತಿಗಣತಿಯಿಂದ ದೇಶ ವಿಭಜಿಸಲ್ಪಡುತ್ತದೆ ಎಂದು ಮೋದಿ ಹೇಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.