ಸಾರಾಂಶ
ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ದಾಖಲೆ ಪ್ರಮಾಣದ ಉಷ್ಣ ಮಾರುತಕ್ಕೆ ಕಾರಣವಾಗಿದ್ದ ‘ಎಲ್ ನಿನೋ’ ಹವಾಮಾನ ಮುಕ್ತಾಯದತ್ತ ಸಾಗಿದ್ದು, ಉತ್ತಮ ಮುಂಗಾರು ಮಳೆಗೆ ಪೂರಕವಾಗಬಲ್ಲ ಲಾ ನಿನೋ ಜುಲೈ- ಸೆಪ್ಟೆಂಬರ್ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ವ ಹವಾಮಾನ ಇಲಾಖೆ ಹೇಳಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಎಲ್‌ನಿನೋದ ಪರಿಣಾಮ ವಿಶ್ವದ ಹಲವು ಭಾಗಗಳಲ್ಲಿ ಭಾರೀ ಉಷ್ಣಮಾರುತ ಕಾಣಿಸಿಕೊಂಡಿತ್ತು. ಅದೀಗ ಮುಕ್ತಾಯದತ್ತ ಸಾಗಿದೆ. ಜುಲೈ- ಸೆಪ್ಟೆಂಬರ್ ವೇಳೆಗೆ ಲಾನಿನೋ ರೂಪುಗೊಳ್ಳುವ ಸಾಧ್ಯತೆ ಶೇ.60ರಷ್ಟಿದೆ. ಆಗಸ್ಟ್- ನವೆಂಬರ್ ವೇಳೆಗೆ ರೂಪುಗೊಳ್ಳುವ ಸಾಧ್ಯತೆ ಶೇ.70ರಷ್ಟಿದೆ ಎಂದು ವಿಶ್ವ ಹವಾಮಾನ ಇಲಾಖೆ ಹೇಳಿದೆ.
ಏನಿದು ಎಲ್ ನಿನೋ, ಲಾ ನಿನಾ?:
ಎಲ್‌ನಿನೋ ಉಷ್ಣ ಮಾರುತಕ್ಕೆ ಕಾರಣವಾದರೆ, ಲಾನಿನೋ ಉತ್ತಮ ಮುಂಗಾರು ಮಳೆ ಸುರಿಯಲು ಪೂರಕವಾದ ವಾತಾವರಣ ನಿರ್ಮಿಸುತ್ತದೆ.
ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ಅಥವಾ ಸಮುದ್ರದ ಮೇಲ್ಮೈ ಸರಾಸರಿಗಿಂತ ಹೆಚ್ಚಿನ ತಾಪವಾದರೆ ಎಲ್ ನಿನೋ ಎನ್ನುತ್ತಾರೆ. ಇದು ಉಷ್ಣ ಮಾರುತಕ್ಕೆ ಕಾರಣವಾಗುತ್ತದೆ.
ಎಲ್ ನಿನೋ ಪ್ರಭಾವವು ಕಡಿಮೆ ಆಗಿ ಸಮುದ್ರದ ಮೇಲ್ಮೈ ತಂಪಾಗುತ್ತದೆ. ಅದಕ್ಕೆ ಲಾ ನಿನಾ ಎನ್ನುತ್ತಾರೆ. ಇದು ಮಳೆ ಸುರಿಸಲು ಪೂರಕವಾಗುತ್ತದೆ.