ಸಾರಾಂಶ
ಪಿಟಿಐ ನವದೆಹಲಿ
ದೇಶದ ಆರು ರಾಜಕೀಯ ಪಕ್ಷಗಳು 2022-23ನೇ ಸಾಲಿನಲ್ಲಿ ಅಜ್ಞಾತ ಮೂಲದಿಂದ ಸ್ವೀಕರಿಸಿರುವ ದೇಣಿಗೆಯಲ್ಲಿ ಚುನಾವಣೆ ಬಾಂಡ್‌ಗಳ ಪಾಲು ಶೇ.82ರಷ್ಟಿದೆ ಎಂಬ ಕುತೂಹಲಕರ ಮಾಹಿತಿ ಪತ್ತೆಯಾಗಿದೆ.
ಚುನಾವಣೆ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುವ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್ ಕಳೆದ ತಿಂಗಳು ರದ್ದುಪಡಿಸಿತ್ತು. ಅದರ ಬೆನ್ನಲ್ಲೇ ಈ ಮಾಹಿತಿ ಲಭ್ಯವಾಗಿದೆ.
ರಾಜಕೀಯ ಪಕ್ಷಗಳ ಆಡಿಟ್ ವರದಿ, ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗಿರುವ ದೇಣಿಗೆ ವರದಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಪಕ್ಷಗಳಿಗೆ ಬರುವ ಬಹುಪಾಲು ದೇಣಿಗೆ ಅಜ್ಞಾತ ಮೂಲದ್ದಾಗಿದೆ ಎಂಬ ವಿಷಯ ಪತ್ತೆಯಾಗಿದೆ ಎಂದು ಅಸೋಸಿಯೇನ್ ಫಾರ್ ಡೆಮೊಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ಹೇಳಿದೆ.
ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಬಿಎಸ್ಪಿ, ಆಪ್ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿಗಳ ವಿವರ ಪರಿಶೀಲಿಸಲಾಗಿದೆ. ಈ ಪಕ್ಷಗಳಿಗೆ 1832.88 ಕೋಟಿ ರು. ಆದಾಯ ಅಜ್ಞಾತ ಮೂಲಗಳಿಂದ ಬಂದಿದೆ.
ಅದರಲ್ಲಿ 1510 ಕೋಟಿ ರು., ಅಂದರೆ ಶೇ.82.42ರಷ್ಟು ಚುನಾವಣೆ ಬಾಂಡ್‌ಗಳಿಂದಲೇ ಬಂದಿದೆ. ಆಯೋಗಕ್ಕೆ ಸ್ವತಃ ಪಕ್ಷಗಳೇ 2022-23ನೇ ಸಾಲಿನಲ್ಲಿ ಸಲ್ಲಿಸಿರುವ ದಾಖಲೆಗಳಲ್ಲಿ ಈ ಅಂಶ ಇದೆ ಎಂದು ಎಡಿಆರ್ ತಿಳಿಸಿದೆ.
ಎಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಗೆ ಅತಿ ಹೆಚ್ಚು ಅಜ್ಞಾತ ಮೂಲದಿಂದ ಆದಾಯ ಬಂದಿದೆ. ಆ ಪಕ್ಷ 1400 ಕೋಟಿ ರು.ಗಳನ್ನು (ಶೇ.76.39) ಸ್ವೀಕರಿಸಿದೆ. ಕಾಂಗ್ರೆಸ್‌ಗೆ 315 ಕೋಟಿ ರು. (ಶೇ.17.19) ಬಂದಿದೆ ಎಂದು ತಿಳಿಸಿದೆ.