ಇಂದೇ ಚುನಾವಣಾ ಬಾಂಡ್‌ ವಿವರ ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ತಾಕೀತು

| Published : Mar 12 2024, 02:06 AM IST / Updated: Mar 12 2024, 08:00 AM IST

ಇಂದೇ ಚುನಾವಣಾ ಬಾಂಡ್‌ ವಿವರ ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ಗೆ ದೊಡ್ಡ ಹಿನ್ನಡೆಯಾಗಿದ್ದು, ಮಂಗಳವಾರದೊಳಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಬಗ್ಗೆ ವಿವಿರಣೆ ನೀಡಲು ಸಿಚಿಸಿದೆ.

ಪಿಟಿಐ ನವದೆಹಲಿ

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ಗೆ ದೊಡ್ಡ ಹಿನ್ನಡೆಯಾಗಿದ್ದು, ಮಂಗಳವಾರದೊಳಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಹಾಗೂ ಅವುಗಳನ್ನು ನಗದೀಕರಿಸಿಕೊಂಡ ರಾಜಕೀಯ ಪಕ್ಷಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ತಾಕೀತು ಮಾಡಿದೆ.

2019ರ ಏಪ್ರಿಲ್‌ 12ರಿಂದ ಈವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ವಿವರವನ್ನು ಮಾರ್ಚ್‌ 6ರೊಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಫೆ.15ರಂದು ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸುವ ಆದೇಶದೊಂದಿಗೆ ತಾಕೀತು ಮಾಡಿತ್ತು. ಅದನ್ನು ಜೂ.30ರ ವರೆಗೆ ವಿಸ್ತರಿಸುವಂತೆ ಎಸ್‌ಬಿಐ ಅರ್ಜಿ ಸಲ್ಲಿಸಿತ್ತು.

ಸೋಮವಾರ ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಸಾಂವಿಧಾನಿಕ ಪೀಠ, ಮಾ.12ರ ವ್ಯವಹಾರದ ಅವಧಿ ಮುಗಿಯುವುದರೊಳಗೆ ಚುನಾವಣಾ ಆಯೋಗಕ್ಕೆ ಎಸ್‌ಬಿಐ ವಿವರ ಸಲ್ಲಿಸಬೇಕು. 

ಚುನಾವಣಾ ಆಯೋಗವು ಮಾ.15ರ ಸಂಜೆ 5 ಗಂಟೆಯೊಳಗೆ ಅದನ್ನು ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತು.

‘ಎಸ್‌ಬಿಐ ಪರ ವಕೀಲರು ಮಂಡಿಸಿದ ವಾದವನ್ನು ಗಮನಿಸಿದರೆ ನಾವು ಕೇಳಿರುವ ವಿವರಗಳು ಎಸ್‌ಬಿಐ ಬಳಿ ಸಿದ್ಧ ರೂಪದಲ್ಲಿ ಲಭ್ಯವಿವೆ ಎಂಬುದು ತಿಳಿಯುತ್ತದೆ. 

ಹೀಗಾಗಿ ಕೂಡಲೇ ಅದನ್ನು ಸಲ್ಲಿಸಬೇಕು. ಆದೇಶ ಪಾಲಿಸಿದ್ದರ ಬಗ್ಗೆ ಎಸ್‌ಬಿಐ ಚೇರ್ಮನ್‌ ಅಫಿಡವಿಟ್‌ ಸಲ್ಲಿಸಬೇಕು’ ಎಂದು ಕೋರ್ಟ್‌ ಸೂಚಿಸಿತು. 

ಇದೇ ವೇಳೆ, ಕೋರ್ಟ್‌ನ ಆದೇಶ ಪಾಲಿಸದ ಎಸ್‌ಬಿಐ ವಿರುದ್ಧ ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿತು.

ಯಾರಿಗೆ ಯಾರು ಕೊಟ್ಟರು ಎಂಬುದು ಬೇಡ: ‘ದೇಣಿಗೆ ನೀಡಿದವರು ಯಾರು ಹಾಗೂ ಅದನ್ನು ಪಡೆದವರು ಯಾರು ಎಂಬ ವಿವರವನ್ನು ಹೊಂದಾಣಿಕೆ ಮಾಡಲು ಮೂರು ವಾರಗಳ ಸಮಯ ಬೇಕು’ ಎಂದು ಎಸ್‌ಬಿಐ ಪರ ವಕೀಲ ಹರೀಶ್‌ ಸಾಳ್ವೆ ಕೋರಿದರು. 

ಅದನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್‌, ತಾನು ಈ ವಿವರಗಳನ್ನು ಹೊಂದಾಣಿಕೆ ಮಾಡಿ ಸಲ್ಲಿಸಲು ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿತು.

‘ನಾವು ಫೆ.15ರಂದು ನೀಡಿದ ಆದೇಶವನ್ನು ಪಾಲಿಸಲು ಕಳೆದ 26 ದಿನಗಳಲ್ಲಿ ನೀವು ಏನು ಮಾಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಅದರ ಬಗ್ಗೆ ಏನೂ ವಿವರವಿಲ್ಲ’ ಎಂದು ಎಸ್‌ಬಿಐಯನ್ನು ಸುಪ್ರೀಂಕೋರ್ಟ್‌ ಇದೇ ವೇಳೆ ತರಾಟೆ ತೆಗೆದುಕೊಂಡಿತು.

ಸುಪ್ರೀಂಕೋರ್ಟ್‌ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ: ಖರ್ಗೆ

ನವದೆಹಲಿ: ಚುನಾವಣಾ ಬಾಂಡ್‌ಗಳ ವಿವರ ಸಲ್ಲಿಸುವ ಗಡುವು ವಿಸ್ತರಿಸಲು ಒಪ್ಪದೆ ಎಸ್‌ಬಿಐಯನ್ನು ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್‌ನ ಆದೇಶವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ.

‘ಅಧಿಕಾರಕ್ಕೆ ಬಂದರೆ 100 ದಿನದಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿರುವ ಕಪ್ಪು ಹಣ ವಾಪಸ್‌ ತರುವುದಾಗಿ ಮಾತು ಕೊಟ್ಟಿದ್ದ ಕೇಂದ್ರ ಸರ್ಕಾರ ತನ್ನದೇ ಬ್ಯಾಂಕ್‌ನಲ್ಲಿದ್ದ ಮಾಹಿತಿಯನ್ನು ಬಚ್ಚಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಜನರನ್ನು ದಾರಿತಪ್ಪಿಸುವ ಕೇಂದ್ರ ಸರ್ಕಾರದ ಈ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ ಸುಪ್ರೀಂಕೋರ್ಟ್‌ ಪ್ರಜಾಪ್ರಭುತ್ವ ಹಾಗೂ ಪಾರದರ್ಶಕತೆಯನ್ನು ರಕ್ಷಿಸಿದೆ. 

ಈ ವಿವರ ಸಲ್ಲಿಸಲು ಎಸ್‌ಬಿಐ ನಾಲ್ಕೂವರೆ ತಿಂಗಳ ಕಾಲಾವಕಾಶ ಕೇಳಿದ್ದೇ ಮೋದಿ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೆಸುತ್ತಿರುವುದಕ್ಕೆ ಸಾಕ್ಷಿ. 

ಈಗಲೂ ಯಾವ ಬಂಡವಾಳಶಾಹಿಗಳು ಬಿಜೆಪಿಗೆ ಯಾವ ಗುತ್ತಿಗೆಗಾಗಿ ದೇಣಿಗೆ ನೀಡಿದ್ದಾರೆ ಎಂಬುದು ದೇಶಕ್ಕೆ ತಿಳಿಯುವುದಿಲ್ಲ’ ಎಂದು ಖರ್ಗೆ ಹೇಳಿದ್ದಾರೆ.