ಸಾರಾಂಶ
ಎಚ್1ಬಿ ವೀಸಾ ಪರ ಪ್ರಬಲ ವಾದ ಮಂಡಿಸುತ್ತಿರುವ ವಿಶ್ವದ ನಂ.1 ಉದ್ಯಮಿ ಹಾಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್, ‘ಎಚ್1ಬಿ ವೀಸಾ ವ್ಯವಸ್ಥೆ ಮುರಿದುಬಿದ್ದಿದೆ. ಅದರಲ್ಲಿ ಸುಧಾರಣೆಗಳನ್ನು ತರುವುದು ಅಗತ್ಯ’ ಎಂದಿದ್ದಾರೆ.
ವಾಷಿಂಗ್ಟನ್: ವಿದೇಶಿಗರಿಗೆ ಅಮೆರಿಕಕ್ಕೆ ತೆರಳಿ ಕೆಲಸ ಮಾಡಲು ಅನುವು ಮಾಡಿಕೊಡುವ ಎಚ್- 1ಬಿ ವೀಸಾ ವ್ಯವಸ್ಥೆ ಬಗ್ಗೆ ಅಮೆರಿಕದಲ್ಲಿ ಎಚ್1ಬಿ ವೀಸಾ ಬಗ್ಗೆ ವಾದ-ಪ್ರತಿವಾದ ಮುಂದುವರಿದಿದೆ. ಎಚ್1ಬಿ ವೀಸಾ ಪರ ಪ್ರಬಲ ವಾದ ಮಂಡಿಸುತ್ತಿರುವ ವಿಶ್ವದ ನಂ.1 ಉದ್ಯಮಿ ಹಾಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್, ‘ಎಚ್1ಬಿ ವೀಸಾ ವ್ಯವಸ್ಥೆ ಮುರಿದುಬಿದ್ದಿದೆ. ಅದರಲ್ಲಿ ಸುಧಾರಣೆಗಳನ್ನು ತರುವುದು ಅಗತ್ಯ’ ಎಂದಿದ್ದಾರೆ.
ಎಚ್- 1ಬಿ ವೀಸಾಗಳ ಬಗ್ಗೆ ನಿಯೋಜಿತ ಅಧ್ಯಕ್ಷ ಟ್ರಂಪ್ ಅವರ ಪಕ್ಷದಲ್ಲೇ ಪರ-ವಿರೋಧ ಅಭಿಪ್ರಾಯಗಳು ಎದ್ದಿರುವ ನಡುವೆ ಟ್ವೀಟ್ ಮಾಡಿರುವ ಮಸ್ಕ್, ‘ಎಚ್- 1ಬಿ ವೀಸಾ ವ್ಯವಸ್ಥೆಯು ಹದಗೆಟ್ಟಿದ್ದು, ಅದಕ್ಕೆ ಸುಧಾರಣೆ ತರುವ ಅಗತ್ಯವಿದೆ. ಇದರ ಭಾಗವಾಗಿ ವಲಸಿಗರಿಗೆ ನೀಡಲಾಗುವ ಕನಿಷ್ಠ ಸಂಬಳದಲ್ಲಿ ಏರಿಕೆ ಮಾಡಬೇಕು’ ಎಂದಿದ್ದಾರೆ.
‘ಈಗಿನ ವ್ಯವಸ್ಥೆಯಲ್ಲಿ ಕಂಪನಿಗಳು ಸಂಬಳವನ್ನೂ ನೀಡಬೇಕು ಹಾಗೂ ಎಚ್1ಬಿ ವೀಸಾ ಶುಲ್ಕವನ್ನೂ ಪಾವತಿಸಬೇಕು. ಇದರಿಂದಾಗಿ ಅಮೆರಿಕ ನೌಕರರಿಗಿಂತ ವಿದೇಶಿ ನೌಕರರು ದುಬಾರಿ ಎಂಬ ಭಾವನೆ ಇದೆ. ಇಡೀ ವ್ಯವಸ್ಥೆ ಈ ರೀತಿ ಹದಗೆಟ್ಟಿದೆ. ಇದನ್ನು ಸುಧಾರಿಸಬೇಕಿದೆ. ಈ ಮೂಲಕ ಅಮೆರಿಕನ್ನರಿಗಿಂತ ವಿದೇಶಿ ನೌಕರರು ದುಬಾರಿ ಎನಿಸುವುದನ್ನು ತಡೆಯಬದಾಗಿದೆ’ ಎಂದು ಹೇಳಿದ್ದಾರೆ.
‘ವಿಶ್ವದ ಪ್ರತಿಭಾವಂತರೆಲ್ಲಾ ಅಮೆರಿಕಕ್ಕೆ ಬರುವಂತಾಗಬೇಕು. ಆದರೆ ಇದಕ್ಕೆ ಎಚ್-1ಬಿ ವೀಸಾ ಮಾರ್ಗವಲ್ಲ’ ಎಂಬ ವಾದಕ್ಕೆ ಉತ್ತರಿಸಿದ ಮಸ್ಕ್ ಹೀಗೆ ಹೇಳಿದ್ದಾರೆ.
ಆತಿಶಿಗೆ ಕೇಜ್ರಿ ತಾತ್ಕಾಲಿಕ ಸಿಎಂ ಎಂದಿದ್ದು ಬೇಸರ ತಂದಿದೆ: ಎಲ್‌ಜಿ
ನವದೆಹಲಿ: ‘ಆತಿಶಿ ಅವರನ್ನು ಆಪ್ ತಾತ್ಕಾಲಿಕ ಮುಖ್ಯಮಂತ್ರಿ ಎಂದು ಕರೆದಿದ್ದರಿಂದ ನನಗೆ ನೋವಾಗಿದೆ’ ಎಂದು ದಿಲ್ಲಿ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಹೇಳಿದ್ದಾರೆ. ‘ಸಂವಿಧಾನದಲ್ಲಿ ಅಂತಹ ಯಾವುದೇ ಹುದ್ದೆ ಇಲ್ಲ ಮತ್ತು ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಮಾಡಿದ ಅಪಚಾರ’ ಎಂದು ಅವರು ಕುಟುಕಿದ್ದಾರೆ. ಹಗರಣಗಳಲ್ಲಿ ಸಿಲುಕಿರುವ ಕೇಜ್ರಿವಾಲ್ 2 ತಿಂಗಳ ಹಿಂದೆ ರಾಜೀನಾಮೆ ನೀಡಿ ಆತಿಶಿಗೆ ಅಧಿಕಾರ ಹಸ್ತಾಂತರಿಸುವಾಗ, ‘ಫೆಬ್ರವರಿ ಚುನಾವಣೆವರೆಗೆ ಆತಿಶಿ ಸಿಎಂ ಆಗಿರುತ್ತಾರೆ. ಚುನಾವಣೆ ಗೆದ್ದ ಬಳಿಕ ಮತ್ತೆ ನಾನು ಸಿಎಂ ಆಗುವೆ’ ಎಂದಿದ್ದರು.
ಪ್ರತಿ ಸಿಗರೇಟ್‌ಗೆ 20 ನಿಮಿಷ ಆಯುಷ್ಯ ಇಳಿಕೆ
ನವದೆಹಲಿ: ಒಂದು ಸಿಗರೇಟ್ ಸೇವನೆಯು ಧೂಮಪಾನಿಗಳ ಜೀವಿತಾವಧಿಯ 20 ನಿಮಿಷಗಳನ್ನು ಕಸಿಯುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ.ಯೂನಿವರ್ಸಿಟಿ ಕಾಲೇಜ್ ಲಂಡನ್ ಬಿಡುಗಡೆಗೊಳಿಸಿರುವ ವರದಿಯಲ್ಲಿ, ಧೂಮಪಾನದಿಂದ ಮಹಿಳೆಯರು ತಮ್ಮ ಜೀವನದ 22 ನಿಮಿಷಗಳನ್ನು ಕಳೆದುಕೊಂಡರೆ, ಪುರುಷರು 17 ನಿಮಿಷಗಳ ನಷ್ಟ ಮಾಡಿಕೊಳ್ಳುತ್ತಾರೆ.
ಸರಾಸರಿಯಾಗಿ ಧೂಮಪಾನಿಗಳು ಪ್ರತಿ ಸಿಗರೇಟ್‌ಗೆ ತಮ್ಮ ಜೀವಿತಾವಧಿಯ 20 ನಿಮಿಷವನ್ನು ಬಲಿ ಕೊಡುತ್ತಾರೆ ಎಂದು ತಿಳಿಸಲಾಗಿದೆ.ಅಂತೆಯೇ, ಒಬ್ಬ ವ್ಯಕ್ತಿ ಎಷ್ಟು ಬೇಗ ಈ ದುರಭ್ಯಾಸವನ್ನು ತ್ಯಜಿಸುತ್ತಾನೋ ಅಷ್ಟು ಸುದೀರ್ಘ ಹಾಗೂ ಆರೋಗ್ಯಕರ ಜೀವನ ನಡೆಸಬಹುದು. ಯಾವುದೇ ವಯಸ್ಸಿನಲ್ಲಿ ಧೂಮಪಾನ ಬಿಟ್ಟರೂ ಅದು ಫಲಪ್ರದ. ಅದು ಬೇಗವಾದಷ್ಟು ಒಳ್ಳೆಯದು ಎಂದು ಸಂಶೋಧನಕಾರರು ತಿಳಿಸಿದ್ದಾರೆ.
ನಾನೆಲ್ಲಿದ್ದೇನೆ? ಏನಾಯ್ತು?: ಬಚಾವಾದ ಪ್ರಯಾಣಿಕ ನುಡಿ
ಸೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘನಘೋರ ದುರಂತದಲ್ಲಿ ಪವಾಡದ ರೀತಿಯಲ್ಲಿ ಪಾರಾಗಿರುವ ಇಬ್ಬರು ಪ್ರಯಾಣಿಕರು ಇನ್ನು ಶಾಕ್‌ನಲ್ಲಿಯೇ ಇದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರ ಬಳಿ ಆಘಾತದಲ್ಲಿ ‘ನಾನು ಎಲ್ಲಿದ್ದೇನೆ? ಏನಾಯ್ತು?’ ಎನ್ನುವ ಪ್ರಶ್ನೆಗಳು ಪದೇ ಪದೇ ಕೇಳುತ್ತಿದ್ದಾರೆ.
ಬ್ಯಾಂಕಾಕ್‌ನಿಂದ ಮುವಾನ್‌ಗೆ ಬಂದಿದ್ದ ಜೆಜು ಏರ್ ವಿಮಾನ ಹಕ್ಕಿಡಿಕ್ಕಿಯಿಂದ ರನ್‌ವೇನಲ್ಲಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ವಿಮಾನದಲ್ಲಿ 181 ಮಂದಿ ಪೈಕಿ 179 ಮಂದಿ ದುರಂತ ಅಂತ್ಯ ಕಂಡಿದ್ದರು. ಇಬ್ಬರು ಪವಾಡದ ರೀತಿಯಲ್ಲಿ ಬದುಕುಳಿದಿದ್ದರು. ಅಪಘಾತದ ಬಳಿಕ 32 ವರ್ಷದ ಲೀ ಮತ್ತು 25 ವರ್ಷದ ಕ್ವಾನ್ ಇಬ್ಬರನ್ನೂ ವಿಮಾನದ ಬಾಲದಿಂದ ಹೊರ ತೆಗೆಯಲಾಗಿತ್ತು. ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೀ ಶಾಕ್‌ನಲ್ಲಿಯೇ ‘ಏನಾಯಿತು? ಯಾಕೆ ನಾನಿಲ್ಲಿದ್ದೇನೆ ಎನ್ನುವ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದಾರೆ. ಆಘಾತದ ಬಗ್ಗೆ ಅವರಿಗೆ ಸ್ಪಷ್ಟವಾದ ನೆನಪಿಲ್ಲ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಪಾರಾದ ಕ್ವಾನ್ ಕೂಡ ಲೀ ರೀತಿಯಲ್ಲಿ ಆಘಾತಕ್ಕೆ ಒಳಗಾಗಿದ್ದು, ಇಬ್ಬರೂ ಇತರ ಪ್ರಯಾಣಿಕರ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಿಶೋರ್ ವಿರುದ್ಧ ತಿರುಗಿಬಿದ್ದ ಪರೀಕ್ಷಾ ಆಕಾಂಕ್ಷಿಗಳು
ಪಟನಾ: ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆ ವೇಳೆ ಭಾನುವಾರ ಪೊಲೀಸರಿಂದ ಲಾಠಿ ಏಟು ತಿಂದಿದ್ದ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಆಕಾಂಕ್ಷಿಗಳು, ಸೋಮವಾರ ಈ ಹೋರಾಟದ ನೇತೃತ್ವ ವಹಿಸಿದ್ದ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ (ಪಿಕೆ) ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಲಾಠಿಚಾರ್ಜ್ ವೇಳೆ ಪ್ರಶಾಂತ್ ಕಿಶೋರ್ ನಾಪತ್ತೆಯಾಗಿದ್ದರು ಎಂದು ಆರೋಪಿಸಿದ್ದಾರೆ.
ಆದರೆ ಇದನ್ನು ಪಿಕೆ ಅಲ್ಲಗೆಳೆದಿದ್ದಾರೆ.‘ಪೊಲೀಸರು ಲಾಠಿ ಚಾರ್ಜ್ ನಡೆಸುವ ವೇಳೆ ಪ್ರತಿಭಟನೆಗೆ ಬೆಂಬಲ ನೀಡಿದ್ದ ಪ್ರಶಾಂತ್ ಕಿಶೋರ್ ಸ್ಥಳದಲ್ಲಿ ಇರಲಿಲ್ಲ’ ಎನ್ನುವುದು ಪ್ರತಿಭಟನಾಕಾರರ ವಾದ. ಹೀಗಾಗಿ ಗಾರ್ಡನಿಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಆಕ್ರೋಶಗೊಂಡು ಪ್ರತಿಭಟನಾಕಾರರು ‘ಪಿಕೆ ಗೋ ಬ್ಯಾಕ್ ಘೋಷಣೆ’ ಕೂಗಿದರು. ಆಗ ಕೋಪಗೊಂಡ ಪಿಕೆ, ‘ನೀವು ನಮ್ಮ ಬಳಿಯೇ ಹೊದಿಕೆ ತೆಗೆದುಕೊಂಡು ಹೋಗಿ ಈಗ ತಿರುಗಿ ಬಿದ್ದಿದ್ದೀರಾ?’ ಎಂದು ಪ್ರಶ್ನಿಸಿದರು. ಆಗ ಸ್ಥಿತಿ ವಿಕೋಪಕ್ಕೆ ಹೋಯಿತು.
ಬಳಿಕ ಕಿಶೋರ್ ಪತ್ರಿಕಾಗೋಷ್ಠಿ ನಡೆಸಿ, ಪ್ರತಿಭಟನಾಕಾರರ ಆರೋಪಗಳನ್ನು ತಳ್ಳಿ ಹಾಕಿದರು. ‘ವಿದ್ಯಾರ್ಥಿಗಳು ಶಾಂತ ಪ್ರತಿಭಟನೆ ನಡೆಸಿದ ಬಳಿಕ ಸ್ಥಳದಿಂದ ಚದರಲು ಹೇಳಿ ನಾನು ಹೊರಟು ಹೋದೆ. ಇದಾದ 45 ನಿಮಿಷದ ನಂತರ ಲಾಠಿಪ್ರಹಾರ ನಡೆದಿದೆ. ಆದರೆ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಸ್ಪಷ್ಟಪಡಿಸಿದರು.