ಮೈಸೂರು ನಂಟಿನ ವ್ಯಕ್ತಿ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿಗೆ ಟ್ರಂಪ್‌ ಸರ್ಕಾರದಲ್ಲಿ ಹುದ್ದೆ

| Published : Nov 14 2024, 12:53 AM IST / Updated: Nov 14 2024, 06:37 AM IST

ಮೈಸೂರು ನಂಟಿನ ವ್ಯಕ್ತಿ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿಗೆ ಟ್ರಂಪ್‌ ಸರ್ಕಾರದಲ್ಲಿ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

  ತಮ್ಮ ಪರವಾಗಿ ಗಟ್ಟಿಯಾಗಿ ನಿಂತು ಪ್ರಚಾರ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಹಾಗೂ ಮೈಸೂರು ನಂಟು ಹೊಂದಿರುವ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರಿಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿದ್ದಾರೆ.

 ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತಮ್ಮ ಪರವಾಗಿ ಗಟ್ಟಿಯಾಗಿ ನಿಂತು ಪ್ರಚಾರ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಹಾಗೂ ಮೈಸೂರು ನಂಟು ಹೊಂದಿರುವ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರಿಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಿದ್ಧ ಮಂತ್ರವಾಗಿರುವ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮಾದರಿಯನ್ನು ಅಮೆರಿಕದಲ್ಲೂ ಜಾರಿಗೆ ತರಲು ಉದ್ದೇಶಿಸಿರುವ ಟ್ರಂಪ್‌ ಅವರು, ಆಡಳಿತ ಸುಧಾರಣಾ ಇಲಾಖೆಗೆ ಈ ಇಬ್ಬರನ್ನೂ ನೇಮಕ ಮಾಡಿದ್ದಾರೆ. 2026ರ ಜು.4ಕ್ಕೆ ಅಮೆರಿಕಕ್ಕೆ ಸ್ವಾತಂತ್ರ್ಯ ಲಭಿಸಿ 250 ವರ್ಷಗಳಾಗಲಿದ್ದು, ಅಷ್ಟರ ವೇಳೆ ಅಮೆರಿಕ ಸರ್ಕಾರದ ಸುಧಾರಣೆ ಹಾಗೂ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆಯನ್ನು ಈ ಇಬ್ಬರಿಗೂ ಹಂಚಿಕೆ ಮಾಡಿದ್ದಾರೆ.

ಗಮನಾರ್ಹ ಎಂದರೆ, ಟ್ರಂಪ್‌ ಅವರ 2ನೇ ಅವಧಿಯ ಸರ್ಕಾರದಲ್ಲಿ ಹುದ್ದೆ ಪಡೆದ ಮೊದಲ ಭಾರತೀಯ ಅಮೆರಿಕನ್‌ ವ್ಯಕ್ತಿ ವಿವೇಕ್‌ ರಾಮಸ್ವಾಮಿ (37) ಆಗಿದ್ದಾರೆ. ರಾಮಸ್ವಾಮಿ ಅವರ ತಂದೆ- ತಾಯಿ ಕೇರಳ ಮೂಲದ ತಮಿಳು ಭಾಷಿಕರು. ಅವರು ಬಹಳ ಹಿಂದೆಯೇ ಉದ್ಯೋಗ ಅರಸಿ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. ತಂದೆ ಗಣಪತಿ ವಿ. ರಾಮಸ್ವಾಮಿ ಅವರು ಕ್ಯಾಲಿಕಟ್‌ನಲ್ಲಿ ವ್ಯಾಸಂಗ ಮಾಡಿದ್ದರೆ, ವಿವೇಕ್‌ ಅವರ ತಾಯಿ ಗೀತಾ ರಾಮಸ್ವಾಮಿ ಅವರು ಮೈಸೂರು ವೈದ್ಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಪದವಿ ಗಳಿಸಿದ್ದವರು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹುದ್ದೆಗಾಗಿ ಸ್ಪರ್ಧಿಸಿದ್ದ ವಿವೇಕ್‌ ಕೊನೆಗೆ ಟ್ರಂಪ್‌ಗೆ ಬೆಂಬಲ ಸೂಚಿಸಿ ಕಣದಿಂದ ಹಿಂದಕ್ಕೆ ಸರಿದಿದ್ದರು.

ಈ ಇಬ್ಬರೂ ಅದ್ಭುತ ಅಮೆರಿಕನ್ನರು ಸರ್ಕಾರಿ ಅಧಿಕಾರಶಾಹಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಿ, ಹೆಚ್ಚುವರಿ ನಿಯಂತ್ರಣಗಳನ್ನು ಕಡಿತಗೊಳಿಸಿ, ಅನಗತ್ಯ ಖರ್ಚುಗಳನ್ನು ತಗ್ಗಿಸಿ, ಸರ್ಕಾರಿ ಸಂಸ್ಥೆಗಳ ಪುನಾರಚನೆ ಮಾಡಬೇಕು ಎಂದು ಟ್ರಂಪ್‌ ಅವರು ಸೂಚಿಸಿದ್ದಾರೆ.