ದೇಶಾದ್ಯಂತ ‘ಎಮರ್ಜೆನ್ಸಿ’ ರಿಲೀಸ್‌, ಆದರೆ ಪಂಜಾಬಲ್ಲಿಲ್ಲ : ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಆಕ್ರೋಶ

| Published : Jan 18 2025, 12:45 AM IST / Updated: Jan 18 2025, 04:42 AM IST

ದೇಶಾದ್ಯಂತ ‘ಎಮರ್ಜೆನ್ಸಿ’ ರಿಲೀಸ್‌, ಆದರೆ ಪಂಜಾಬಲ್ಲಿಲ್ಲ : ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಿರುವ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರ ‘ಎಮರ್ಜೆನ್ಸಿ’ ಚಿತ್ರವು ಶುಕ್ರವಾರ ದೇಶಾದ್ಯಂತ ಬಿಡುಗಡೆಗೊಂಡಿದೆ. ಆದರೆ ಪಂಜಾಬ್‌ನಲ್ಲಿ ಮಾತ್ರ ಸಿಖ್‌ ಸಮುದಾಯ ಹಾಗೂ ಗುರುದ್ವಾರ ಪ್ರಬಂಧಕ ಸಮಿತಿಯ ಭಾರಿ ವಿರೋಧದ ಕಾರಣ ಚಿತ್ರ ಪ್ರದರ್ಶನ ಕಂಡಿಲ್ಲ.

ಚಂಡೀಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಿರುವ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರ ‘ಎಮರ್ಜೆನ್ಸಿ’ ಚಿತ್ರವು ಶುಕ್ರವಾರ ದೇಶಾದ್ಯಂತ ಬಿಡುಗಡೆಗೊಂಡಿದೆ. ಆದರೆ ಪಂಜಾಬ್‌ನಲ್ಲಿ ಮಾತ್ರ ಸಿಖ್‌ ಸಮುದಾಯ ಹಾಗೂ ಗುರುದ್ವಾರ ಪ್ರಬಂಧಕ ಸಮಿತಿಯ ಭಾರಿ ವಿರೋಧದ ಕಾರಣ ಚಿತ್ರ ಪ್ರದರ್ಶನ ಕಂಡಿಲ್ಲ.

1975-77ರವರೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತುಸ್ಥಿತಿಯ ಕಥಾ ಹಂದರ ಹೊಂದಿರುವ ಎಮರ್ಜೆನ್ಸಿ ಚಿತ್ರವು ಸಿಖ್ಖರಿಗೆ ಅವಮಾನಕಾರಿಯಾಗಿದೆ. ಚಿತ್ರದಲ್ಲಿ ಸಿಖ್ಖರನ್ನು ಅವಮಾನಕಾರಿಯಾಗಿ ಪ್ರಸ್ತುತಪಡಿಸಲಾಗಿದೆ ಎಂದು ಸಿಖ್ಖರ ಉನ್ನತ ಮಂಡಳಿ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ ಹೇಳಿದೆ. ಅಮೃತಸರ, ಬಠಿಂಡಾ, ಪಟಿಯಾಲಾ ಮತ್ತು ಲುಧಿಯಾನಾದಲ್ಲಿ ಎಮರ್ಜೆನ್ಸಿ ಪ್ರದರ್ಶನಗೊಳ್ಳಲಿಲ್ಲ.

ಕಂಗನಾ ಆಕ್ರೋಶ:

ಚಿತ್ರ ಪ್ರದರ್ಶನಕ್ಕೆ ಗುರುದ್ವಾರ ಸಮಿತಿ ಅಡ್ಡಿ ಪಡಿಸಿರುವುದು ಕಲೆಗೆ ಮತ್ತು ಕಲಾವಿದರಿಗೆ ನೀಡಿದ ಕಿರುಕುಳ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ.31ರಿಂದ ಏ.4ರವರೆಗೆ 2 ಹಂತದಲ್ಲಿ ಬಜೆಟ್‌ ಸೆಷನ್‌?

ನವದೆಹಲಿ: ಜ.31ರಿಂದ ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಭಾಗ ಆರಂಭವಾಗುವ ಸಾಧ್ಯತೆ ಇದ್ದು, ಫೆ.13ರವರೆಗೆ ನಡೆಯಲಿದೆ. ನಂತರ 2ನೇ ಭಾಗ ಮಾ.19ರಿಂದ ಏ.4ರವರೆಗೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಿಲಾ ಸೀತಾರಾಮನ್‌ ಅವರು ಸತತ 8ನೇ ಬಾರಿ ಮುಂಗಡಪತ್ರ ಮಂಡಿಸಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 31ರಂದು ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ ಎಂದು ಮೂಲಗಳು ಹೇಳಿವೆ.

ರಷ್ಯಾ ಸೇನೆ ಸೇರಿದ್ದ 16 ಭಾರತೀಯರು ನಾಪತ್ತೆ

ನವದೆಹಲಿ: ಉಕ್ರೇನ್ ವಿರುದ್ಧ ಯುದ್ಧದ ಸಂದರ್ಭದಲ್ಲಿ ರಷ್ಯಾ ಸೇನೆಗೆ ಸೇರ್ಪಡೆಗೊಂಡಿದ್ದ 12 ಭಾರತೀಯರು ಸಾವನ್ನಪ್ಪಿದ್ದಾರೆ. ಇನ್ನು ಸೇನೆ ಸೇರಿದ್ದ 16 ಭಾರತೀಯ ಯುವಕರು ನಾಪತ್ತೆ ಆಗಿದ್ದು, ಅವರನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸಬೇಕೆಂದು ಭಾರತ ಸರ್ಕಾರ ರಷ್ಯಾಕ್ಕೆ ಆಗ್ರಹಿಸಿದೆ.

ಶುಕ್ರವಾರ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್ ‘ರಷ್ಯಾದ ಸೇನೆಯಲ್ಲಿ ಒಟ್ಟು 126 ಭಾರತೀಯರು ಸೇವೆ ಸಲ್ಲಿಸುತ್ತಿದ್ದರು. ಆ ಪೈಕಿ 96 ಮಂದಿ ರಷ್ಯಾದ ಸಶಸ್ತ್ರ ಪಡೆಗಳಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದಾರೆ. 12 ಜನ ಸಾವನ್ನಪ್ಪಿದ್ದಾರೆ. ಉಳಿದ 18 ಜನರ ಪೈಕಿ16 ವ್ಯಕ್ತಿಗಳು ಎಲ್ಲಿದ್ದಾರೆಂದು ತಿಳಿದಿಲ್ಲ. ಅವರನ್ನು ಪತ್ತೆ ಮಾಡಿ ಭಾರತಕ್ಕೆ ವಾಸು ಕಳಿಸಬೇಕು’ ಎಂದು ಆಗ್ರಹಿಸಿದರು.

ಸ್ಟಾರ್ಟಪ್‌ನಲ್ಲಿ ಬೆಂಗಳೂರನ್ನು ಹಿಂದಿಕ್ಕಿದ ಮಹಾರಾಷ್ಟ್ರ: ಫಡ್ನವೀಸ್‌

ನಾಗ್ಪುರ: ‘ಕಳೆದ 1 ವರ್ಷದಲ್ಲಿ ಮಹಾರಾಷ್ಟ್ರವು ಬೆಂಗಳೂರನ್ನು ಹಿಂದಿಕ್ಕಿ ಭಾರತದ ಸ್ಟಾರ್ಟಪ್‌ ರಾಜಧಾನಿ ಎನಿಸಿಕೊಂಡಿದೆ. ಸ್ಟಾರ್ಟಪ್‌ಗಳ ಸಂಖ್ಯೆ ಹಾಗೂ ಮೌಲ್ಯಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ’ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.ಶುಕ್ರವಾರ ಕೇಂದ್ರ ಸರ್ಕಾರದ ತಂತ್ರಜ್ಞಾನ ಎಕ್ಸ್‌ಪೋದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲೀಗ ಅತ್ಯಧಿಕ ಸ್ಟಾರ್ಟಪ್‌ಗಳಿವೆ. ನಾವು ತಂತ್ರಜ್ಞಾನದ ನಾಯಕರಾಗಿದ್ದು, ಹಲವು ಯುನಿಕಾರ್ನ್‌ಗಳು ಇಲ್ಲಿಗೆ ಬರುತ್ತಿವೆ. ಈ ವಿಷಯದಲ್ಲಿ ಮಹಾರಾಷ್ಟ್ರ ಬೆಂಗಳೂರನ್ನು ಹಿಂದಿಕ್ಕಿದೆ. ನಾವೀನ್ಯತೆಯ ಕ್ಷೇತ್ರದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಸರ್ಕಾರ ಇನೋವೇಷನ್‌ ಸಿಟಿ ನಿರ್ಮಿಸಲಿದೆ’ ಎಂದರು. ಜತೆಗೆ, ಕೃತಕ ಬುದ್ಧಿಮತ್ತೆಯ ಅಳವಡಿಕೆಯೂ ಅಗತ್ಯ ಎಂದರು.

ಸ್ಪೇಸ್‌ಎಕ್ಸ್‌ ಸ್ಟಾರ್‌ಶಿಪ್‌ ರಾಕೆಟ್‌ 7ನೇ ಪ್ರಯೋಗ ವಿಫಲ

ಟೆಕ್ಸಾಸ್‌: ಉದ್ಯಮಿ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ನ ಹೊಸ ಸ್ಟಾರ್‌ಶಿಪ್‌ ರಾಕೆಟ್‌ನ 7ನೇ ಪರೀಕ್ಷಾರ್ಥ ಪ್ರಯೋಗ ಶುಕ್ರವಾರ ವಿಫಲಗೊಂಡಿದೆ. ಈ ಬಹುನಿರೀಕ್ಷಿತ ರಾಕೆಟ್‌ ನಭಕ್ಕೆ ಜಿಗಿದ ಕೆಲವೇ ನಿಮಿಷದಲ್ಲಿ ನಾಶವಾಗಿದ್ದು, ಅದರ ಬೂಸ್ಟರ್‌ ಅನ್ನು ಮಾತ್ರ ಯಶಸ್ವಿಯಾಗಿ ಹಿಡಿಯಲಾಗಿದೆ.ಮೆಕ್ಸಿಕೋ ಗಡಿ ಸಮೀಪದ ಬೊಕಾ ಚಿಕಾ ಪ್ರದೇಶದಲ್ಲಿ ರಾಕೆಟ್‌ ಅನ್ನು ಉಡ್ಡಯನ ಮಾಡಲಾಗಿದ್ದು, ಇದು ಗಲ್ಫ್‌ ಆಫ್‌ ಮೆಕ್ಸಿಕೋ ಮೂಲಕ ಸಾಗಿ ಪರೀಕ್ಷಾರ್ಥವಾಗಿ ಅಳವಡಿಸಿದ್ದ 10 ಡಮ್ಮಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಬೇಕಿತ್ತು. ಆದರೆ ಗಗನಕ್ಕೇರಿದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಾಕೆಟ್‌ ಎರಡು ಭಾಗಗಳಾಗಿ ತುಂಡಾಯಿತು.

ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ, ಇಂಧನದ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇದರಿಂದ 400 ಅಡಿ ಎತ್ತರದ ಈ ರಾಕೆಟ್‌ ಎರಡು ಹೋಳಾಗಿ ನಷ್ಟಗೊಂಡಿತು.ಇದು ವಿಶ್ವದ ಅತಿದೊಡ್ಡ ಮತ್ತು ಹೆಚ್ಚು ಶಕ್ತಿ ಶಾಲಿ ರಾಕೆಟ್‌ನ ಏಳನೇ ಪ್ರಯೋಗಾರ್ಥ ಉಡ್ಡಯನವಾಗಿತ್ತು. ನಾಸಾವು ಚಂದ್ರನ ಮೇಲೆ ಸ್ಟಾರ್‌ಶಿಪ್‌ಗಳನ್ನು ಇಳಿಸಲು ಉದ್ದೇಶಿಸಿದ್ದು, ಮಸ್ಕ್‌ ಮಾತ್ರ ಮಂಗಳಗ್ರಹದ ಮೇಲೆ ಸ್ಟಾರ್‌ಶಿಪ್‌ ಇಳಿಸುವ ಗುರಿ ಹೊಂದಿದ್ದಾರೆ.

ರಾಕೆಟ್‌ ಹಾರಿಸಿದ ಬಳಿಕ ಅದರ ಬೂಸ್ಟರ್‌ ಅನ್ನು ಮರುಬಳಸುವ ಉದ್ದೇಶ ಸ್ಪೇಸ್ಎಕ್ಸ್‌ಗಿದೆ. ಹೀಗಾಗಿ ರಾಕೆಟ್‌ನ ಬೂಸ್ಟರ್‌ ನೆಲಕ್ಕೆ ಬೀಳುವ ಮೊದಲು ತನ್ನ ಬೃಹತ್‌ ಟವರ್‌ ಮೂಲಕ ಅದನ್ನು ಹಿಡಿಯುವ ವ್ಯವಸ್ಥೆಯನ್ನು ಸ್ಪೇಸ್‌ಎಕ್ಸ್‌ ಹೊಂದಿದೆ. ಈಗಾಗಲೇ ಅದರ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿದ್ದು, ಈ ರಾಕೆಟ್‌ನ ಉಡ್ಡಯನ ವೇಳೆಯೂ ಬೂಸ್ಟರ್‌ ಅನ್ನು ಹಿಡಿಯುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.