ಸಾರಾಂಶ
ತ್ರಿಶೂರ್: ಕನ್ನಡದ ಚಿತ್ರಗಳಲ್ಲೂ ಹಾಡಿದ್ದ ಕೇರಳದ ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (80) ಅವರು ಗುರುವಾರ ಸಂಜೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಕೆಲ ಕಾಲದಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಜಯಚಂದ್ರನ್ ಅವರು ಪತ್ನಿ ಲಲಿತಾ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ 16,000ಕ್ಕೂ ಅಧಿಕ ಹಾಡುಗಳಿಗೆ ಕಂಠದಾನ ಮಾಡಿರುವ ಜಯಚಂದ್ರನ್ ಅವರು, ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಫಿಲಂ ಪ್ರಶಸ್ತಿ, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 1944 ಮಾ.3ರಂದು ಎರ್ನಾಕುಲಂನಲ್ಲಿ ಜನಿಸಿದ್ದು ಇವರು ಬಾಲ್ಯದಿಂದಲೇ ಸಂಗೀತಾಸಕ್ತರಾಗಿದ್ದರು.==
ಇಸ್ರೋ ಸ್ಪೇಡೆಕ್ಸ್ ಡಾಕಿಂಗ್ ಪ್ರಕ್ರಿಯೆ ಇಂದು ಸಹಜಸ್ಥಿತಿಗೆ?ಬೆಂಗಳೂರು: ಸ್ಪೇಡೆಕ್ಸ್ ನೌಕೆಗಳ ಡಾಂಕಿಂಗ್ ಪ್ರಕ್ರಿಯೆಯ ವೇಳೆ ಬುಧವಾರ ಸಂಭವಿಸಿದ್ದ ದೋಷವನ್ನು ಇದೀಗ ಸರಿಪಡಿಸುವ ಪ್ರಕ್ರಿಯೆ ಗುರುವಾರ ನಡೆದಿದ್ದು, ಶುಕ್ರವಾರ ಅದು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಇಸ್ರೋ ಹೇಳಿದೆ.ಗುರುವಾರ ಡಾಕಿಂಗ್ ಹಾಗೂ ಅನ್‌ಡಾಕಿಂಗ್ ಪ್ರಯೋಗವನ್ನು ನಡೆಸಲು ಉದ್ದೇಶಿಸಲಾಗಿತ್ತಾದರೂ, ನೌಕೆಗಳು ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಚಲಿಸಿದ್ದವು. ಪರಿಣಾಮವಾಗಿ ಪ್ರಯೋಗವನ್ನು ರದ್ದುಗೊಳಿಸಲಾಗಿತ್ತು. ಇದೀಗ ಅವುಗಳು ಪರಸ್ಪರ ಸಮೀಪಿಸುವ ವೇಗವನ್ನು ತಗ್ಗಿಸಲಾಗಿದ್ದು, ಶುಕ್ರವಾರ ಅವುಗಳು ನಿರೀಕ್ಷಿತ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ಇಸ್ರೋ ಟ್ವೀಟ್ ಮಾಡಿದೆ.ಇಸ್ರೋ ಡಾಕಿಂಗ್ ಪ್ರಯೋಗ ಯಶಸ್ವಿಯಾದಲ್ಲಿ, ಈ ಸಾಧನೆ ಮಾಡಿದ ವಿಶ್ವದ 4ನೇ ದೇಶವಾಗಿ ಹೊರಹೊಮ್ಮಲಿದೆ.
==ಗೋವಾ ಅಧಿಕಾರಿಗಳಿಗೆ ಮನ್ ಕೀ ಬಾತ್ ಕೇಳುವುದು ಕಡ್ಡಾಯ
ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನನ್ನು ಸರ್ಕಾರದ ಎಲ್ಲಾ ವಿಭಾಗಗಳ ಮುಖ್ಯಸ್ಥರು ಕಡ್ಡಾಯವಾಗಿ ಕೇಳಬೇಕು ಎಂದು ಗೋವಾ ಸರ್ಕಾರ ಆದೇಶ ಹೊರಡಿಸಿದೆ.‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ನೀಡುವ ಸಲಹೆ ಸೂಚನೆಗಳು ಪ್ರೇರಣಾದಾಯಕವಾಗಿರಲಿದ್ದು, ಇದರಿಂದ ಅಧಿಕಾರಿಗಳು ಸ್ಫೂರ್ತಿ ಪಡೆದು, ಸರ್ಕಾರದ ಯೋಜನೆಗಳನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಬಹುದಾಗಿದೆ. ಇದರಿಂದ ಸ್ವಯಂಪೂರ್ಣ ಗೋವಾ (ವಿಕಸಿತ ಗೋವಾ) ಸಾಧ್ಯವಾಗಲಿದೆ’ ಎಂದು ಸರ್ಕಾರದ ಆದೇಶ ಹಂಚಿಕೊಂಡು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.==
ರಷ್ಯಾದಲ್ಲಿ ಮಕ್ಕಳ ಹೆತ್ತರೆ 81 ಸಾವಿರ ರು. ಇನಾಮು!ಮಾಸ್ಕೋ: ಜನಸಂಖ್ಯೆ ಕುಸಿತದಿಂದ ಆತಂಕದಲ್ಲಿರುವ ರಷ್ಯಾ, ತನ್ನ ದೇಶದಲ್ಲಿ ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡುವ 25 ವರ್ಷದ ಒಳಗಿನ ಯುವತಿಯರಿಗೆ 81 ಸಾವಿರು ರು. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ.ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಯುವತಿಯರು ಸ್ಥಳೀಯ ವಿಶ್ವವಿದ್ಯಾನಿಲಯ ಅಥವಾ ಕಾಲೇಜಿನಲ್ಲಿ ಪೂರ್ಣ ಪ್ರಮಾಣದ ವಿದ್ಯಾಭ್ಯಾಸ ನಡೆಸುತ್ತಿರಬೇಕು ಎಂದು ತಿಳಿಸಲಾಗಿದೆ. ಆದರೆ ಜನನದ ಸಂದರ್ಭ ಮಗು ಸಾವನ್ನಪ್ಪಿದರೆ ಪ್ರೋತ್ಸಾಹಧನ ನೀಡುವುದಿಲ್ಲ ಎಂದಿದೆ.ಆದರೆ, ಒಂದು ವೇಳೆ ಮಗು ಜನಿಸಿದ ನಂತರ ಹಠಾತ್ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದರೆ ಪ್ರೋತ್ಸಾಹಧನವನ್ನು ಹಿಂಪಡೆಯಲಾಗುತ್ತದೆಯೇ? ಅಂಗವಿಕಲ ಮಗುವಿಗೆ ಜನ್ಮ ನೀಡಿದರೆ ಹಣ ನೀಡಲಾಗುತ್ತದೆಯೇ? ಪ್ರಸವದ ನಂತರದ ಚೇತರಿಕೆಗೆ ಪ್ರತ್ಯೇಕವಾಗಿ ಆರ್ಥಿಕ ನೆರವನ್ನು ನೀಡಲಾಗುತ್ತದೆಯೇ ಎನ್ನುವುದರ ಬಗ್ಗೆ ಸ್ಪಷ್ಟಪಡಿಸಿಲ್ಲ.
ರಷ್ಯಾದಲ್ಲಿ ಜನಸಂಖ್ಯೆ ಕುಸಿತ:ಕಳೆದ ವರ್ಷ ರಷ್ಯಾದಲ್ಲಿ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿತ್ತು. 2024ರ ಮೊದಲಾರ್ಧದಲ್ಲಿ 5,99,600 ಶಿಶುಗಳ ಜನನವಾಗಿದ್ದು, ಇದು 25 ವರ್ಷಗಳಲ್ಲಿಯೇ ಅತಿ ಕನಿಷ್ಠವಾಗಿತ್ತು. ಮಾತ್ರವಲ್ಲದೇ 2023ಕ್ಕಿಂತ 16 ಸಾವಿರ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಜನಸಂಖ್ಯಾ ಕುಸಿತ ಗಡೆಎಗೆ ಕೆಲಸದ ವೇಳೆ ಸೆಕ್ಸ್ ನಡೆಸಿ ಮಕ್ಕಳ ಹೊಂದಬಹುದು ಎಂಬ ವಿಚಿತ್ರ ಆಫರ್ ಅನ್ನೂ ರಷ್ಯಾ ಸರ್ಕಾರ ನೀಡಿತ್ತು.
==ಎಚ್‌ಎಂಪಿವಿ ಆಯ್ತು, ಇದೀಗ ಚೀನಾದಲ್ಲಿ ಮಂಕಿ ಪಾಕ್ಸ್‌ನ ಹೊಸ ರೂಪಾಂತರಿ ಪತ್ತೆ
ಹಾಂಕಾಂಗ್: ಕೊರೋನಾ, ಎಚ್‌ಎಂಪಿವಿ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಶುರುವಾಗಿದೆ. ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಂಕಿ ಪಾಕ್ಸ್‌ನ ಹೊಸ ರೂಪಾಂತರಿ ತಳಿ (ಕ್ಲ್ಯಾಡ್ ಐಬಿ)ಯನ್ನು ಪತ್ತೆಹಚ್ಚಿದ್ದಾಗಿ ಗುರುವಾರ ಹೇಳಿಕೊಂಡಿದೆ.ಕಾಂಗೋ ಮೂಲದ ಹಾಗೂ ವಿದೇಶ ಪ್ರಯಾಣ ಇತಿಹಾಸ ಹೊಂದಿರುವ ವ್ಯಕ್ತಿಯಲ್ಲಿ ಈ ಹೊಸ ವಂಶಾವಳಿ ಪತ್ತೆಯಾಗಿದೆ. ಈ ಸೋಂಕು ಈತನ ಜತೆಗೆ ಸಂಪರ್ಕ ಹೊಂದಿದ್ದ ಇತರೆ ನಾಲ್ವರಿಗೂ ಹರಡಿದೆ.ಏನಿದು ಮಂಕಿಪಾಕ್ಸ್?:ಮಂಕಿಪಾಕ್ಸ್ ತಳಿಯ ಸೋಂಕು ತಗುಲಿದರೆ ಜ್ವರದೊಂದಿಗೆ ಮೈಯಲ್ಲಿ ಸಣ್ಣ ಪ್ರಮಾಣದ ದದ್ದುಗಳು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅಪರೂಪದ ಪ್ರಕರಣಗಳಲ್ಲಿ ಈ ಸೋಂಕು ಪ್ರಾಣಾಪಾಯ ತಂದೊಡ್ಡಬಹುದು. ಆದರೆ ಹಳೇ ಮಂಕಿಪಾಕ್ಸ್‌ಗಿಂತ ಇದು ತೀವ್ರ ಸ್ವರೂಪದಲ್ಲಿ ಕಾಯಿಲೆ ಉಂಟು ಮಾಡವಹುದು ಎಂದು ಹೇಳಲಾಗಿದೆ.
ಆಫ್ರಿಕಾದಲ್ಲಿ ತೀವ್ರವಾಗಿತ್ತು:ಕಳೆದೆರಡು ವರ್ಷಗಳಿಂದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆ ಬಳಿಕ ಇದು ನೆರೆಯ ಬುರುಂಡಿ, ಕೀನ್ಯಾ, ರಾಂಡ್ವಾ, ಉಗಾಂಡಾದಂಥ ದೇಶಗಳಿಗೂ ತೀವ್ರವಾಗಿ ವ್ಯಾಪಿಸಿತ್ತು. ಇದರಿಂದ ಡಬ್ಲ್ಯುಎಚ್‌ಒ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.ಕಾಂಗೋದಲ್ಲಿ ಪತ್ತೆಯಾದ ಕ್ಲಾಡ್ ಐ ಹೆಸರಿನ ಮಂಕಿಪಾಕ್ಸ್ ಸ್ಥಳೀಯವಾಗಿ ಪತ್ತೆಯಾದ ವಂಶಾವಳಿಯಾಗಿತ್ತು. ಆದರೆ ಇದೀಗ ಚೀನಾದಲ್ಲಿ ಪತ್ತೆಯಾಗಿರುವ ಕ್ಲಾಡ್ ಐಬಿ ಲೈಂಗಿಕ ಸಂಪರ್ಕ ಸೇರಿ ಮಾಮೂಲಿ ಸಂಪರ್ಕದಿಂದಲೂ ಸುಲಭವಾಗಿ ಹರಡುವ ತಳಿಯಾಗಿದೆ. ಇದು ಸುಲಭವಾಗಿ ಜನರಿಗೆ ಹರಡುವುದರಿಂದ ಚೀನಾ ಸರ್ಕಾರ ಸೋಂಕು ಪೀಡಿತರ ಮೇಲೆ ನಿಗಾ ಇಟ್ಟಿದೆ.