ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿದೆ: ಮೋದಿ

| Published : Jan 10 2025, 12:45 AM IST

ಸಾರಾಂಶ

‘ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿದೆ. ದೇಶದ ಪರಂಪರೆಯಿಂದಾಗಿ ಜಗತ್ತು ಇಂದು ಭಾರತದ ಮಾತನ್ನು ಕೇಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಿಟಿಐ ಭುವನೇಶ್ವರ

‘ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿದೆ. ದೇಶದ ಪರಂಪರೆಯಿಂದಾಗಿ ಜಗತ್ತು ಇಂದು ಭಾರತದ ಮಾತನ್ನು ಕೇಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರವಾಸಿ ಭಾರತೀಯ ದಿವಸದ ಪ್ರಯುಕ್ತ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಪ್ರಧಾನಿ, ‘ಭಾರತ ಕೇವಲ ಪ್ರಜಾಪ್ರಭುತ್ವದ ತಾಯಿಯಷ್ಟೇ ಅಲ್ಲ. ಪ್ರಜಾಪ್ರಭುತ್ವವು ಈ ದೇಶದ ಭಾಗವಾಗಿದೆ. ಇಂದು ಜಗತ್ತು ಭಾರತದ ಮಾತನ್ನು ಕೇಳುತ್ತಿದೆ. ಅದು ತನ್ನದೇ ಆದ ಅಭಿಪ್ರಾಯಗಳನ್ನು ಮಾತ್ರವಲ್ಲದೇ ಜಾಗತಿಕ ದಕ್ಷಿಣದ ಅಭಿಪ್ರಾಯಗಳನ್ನು ಕೂಡ ಬಲಪಡಿಸುತ್ತದೆ. ಭಾರತವು ತನ್ನ ಪರಂಪರೆಯ ಬಲದಿಂದಾಗಿ, ಭವಿಷ್ಯವು ಯುದ್ಧದಲ್ಲಿ ಅಲ್ಲ ಬುದ್ಧನಲ್ಲಿದೆ ಎಂದು ಹೇಳಲು ಸಾಧ್ಯ’ ಎಂದು ಹೇಳಿದರು.ಇದೇ ವೇಳೆ ಪ್ರಧಾನಿ ಅನಿವಾಸಿ ಭಾರತೀಯರ ಕುರಿತು ಕೂಡ ಮಾತನಾಡಿದರು. ‘ಅನಿವಾಸಿ ಭಾರತೀಯರು ಎಲ್ಲೇ ವಾಸಿಸುತ್ತಿದ್ದರೂ ಅವರ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಬೇರೆ ದೇಶಗಳಲ್ಲಿರುವ ಭಾರತೀಯರನ್ನು ದೇಶದ ರಾಯಭಾರಿಗಳೆಂದು ಪರಿಗಣಿಸಲಾಗುತ್ತದೆ. ಭಾರತವು ಕೇವಲ ಯುವ ರಾಷ್ಟ್ರವಲ್ಲ. ಕೌಶಲ್ಯಪೂರ್ಣ ಯುವಕರ ದೇಶವಾಗಿದೆ. ಭಾರತದ ಯುವಕರು ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಅವರು ಕೌಶಲ್ಯವಂತರಾಗಿ ಹೋಗುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತದೆ’ ಎಂದರು.