ಸಾರಾಂಶ
‘ಖರ್ಗೆ ಕುಟುಂಬ, ಕೌಟುಂಬಿಕ ರಾಜಕೀಯದಲ್ಲಿ ತೊಡಗಿದೆ’ ಎಂದು ಘನಶ್ಯಾಮ್ ತಿವಾರಿ ನೀಡಿದ ಹೇಳಿಕೆಯನ್ನು ರಾಜ್ಯಸಭೆಯ ಕಡತದಿಂದ ತೆಗೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ ಪ್ರಸಂಗ ನಡೆಯಿತು.
ನವದೆಹಲಿ: ‘ಖರ್ಗೆ ಕುಟುಂಬ, ಕೌಟುಂಬಿಕ ರಾಜಕೀಯದಲ್ಲಿ ತೊಡಗಿದೆ’ ಎಂದು ಬಿಜೆಪಿ ಸದಸ್ಯ ಘನಶ್ಯಾಮ್ ತಿವಾರಿ ನೀಡಿದ ಹೇಳಿಕೆಯನ್ನು ರಾಜ್ಯಸಭೆಯ ಕಡತದಿಂದ ತೆಗೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ ಪ್ರಸಂಗ ಬುಧವಾರ ನಡೆಯಿತು.
ಬುಧವಾರ ಕಲಾಪ ಆರಂಭವಾಗುತ್ತಲೇ ಎದ್ದುನಿಂತ ಖರ್ಗೆ, ‘ಬಿಜೆಪಿ ಸದಸ್ಯ ತಿವಾರಿ ನನ್ನ ರಾಜಕೀಯ ಜೀವನದ ಬಗ್ಗೆ ಮಾತನಾಡುವ ವೇಳೆ ಪರಿವಾರ್‌ವಾದ್ (ಕುಟುಂಬ ರಾಜಕೀಯ) ಎಂಬ ಪದ ಬಳಸಿದ್ದಾರೆ. ನಮ್ಮ ಇಡೀ ಕುಟುಂಬ ರಾಜಕೀಯದಲ್ಲಿ ಇದೆ ಎಂದು ಹೇಳಿದ್ದಾರೆ’ ಎಂದರು.
‘ಆದರೆ ನಮ್ಮ ಕುಟುಂಬದಲ್ಲೇ ನಾನೇ ಮೊದಲ ರಾಜಕೀಯ ವ್ಯಕ್ತಿ’ ಎಂದ ಖರ್ಗೆ, ‘ನಮ್ಮ ತಂದೆ 85 ವರ್ಷದವರೆಗೆ ಬದುಕಿದ್ದರು. ಆದರೆ ಅವರು ರಾಜಕೀಯ ಪ್ರವೇಶ ಮಾಡಿರಲಿಲ್ಲ. ಹೀಗಾಗಿ ನನ್ನ ಮೇಲಿನ ಕುಟುಂಬ ರಾಜಕೀಯದ ಕುರಿತ ಪದವನ್ನು ಕಡತದಿಂದ ತೆಗೆಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಧನಕರ್, ‘ನೀವು ನಿಮ್ಮ ತಂದೆಗಿಂತ ಹೆಚ್ಚು ಕಾಲ ಬಾಳಿ ಬದುಕಿ ಎಂದು ಹಾರೈಸಿದರು. ಜೊತೆಗೆ, ನಮ್ಮ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಅಂಶ ಕಡತದಲ್ಲಿ ಇರದಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಗೋವಾದಲ್ಲಿ ಮದ್ಯ ನಿಷೇಧಕ್ಕೆ ಬಿಜೆಪಿ ಶಾಸಕ ಆಗ್ರಹ!
ಪಣಜಿ: ಗೋವಾ ಎಂದರೆ ಮದ್ಯ ಹಾಗೂ ಮೋಜಿಗೆ ಫೇಮಸ್. ಅಬಕಾರಿಯಿಂದಲೇ ರಾಜ್ಯಕ್ಕೆ ಹೆಚ್ಚು ಆದಾಯ ಬರುತ್ತದೆ. ಆದರೆ, ‘ವಿಕಸಿತ ಭಾರತ ಮತ್ತು ವಿಕಸಿತ ಗೋವಾಕ್ಕಾಗಿ ಗೋವಾದಲ್ಲಿ ಮದ್ಯಸೇವನೆಯನ್ನು ನಿಷೇಧಿಸಬೇಕು’ ಎಂದು ಗೋವಾದ ಮಾಯೆಂ ಕ್ಷೇತ್ರದ ಬಿಜೆಪಿ ಶಾಸಕ ಪ್ರೇಮೆಂದ್ರ ಶೇಟ್ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.ಇದರ ಬೆನ್ನಲ್ಲೇ, ನಿರೀಕ್ಷೆಯಂತೆ ಅವರ ಆಗ್ರಹಕ್ಕೆ ಬಿಜೆಪಿ ಸಹೋದ್ಯೋಗಿಗಳು ಹಾಗೂ ಇತರ ಪಕ್ಷದ ಶಾಸಕರು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ್ದು, ‘ಮದ್ಯ ಸೇವನೆ ನಿಷೇಧಿಸಿದರೆ ಗೋವಾ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದಾರೆ.
‘ಗೋವಾದಲ್ಲಿ ಮದ್ಯ ಸೇವಿಸಿ, ವಾಹನ ಚಾಲನೆ ಕಾರಣದಿಂದ ಅಪಘಾತ ಹಾಗೂ ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಹೀಗಾಗಿ ರಾಜ್ಯದಲ್ಲಿ ಆಲ್ಕೋಹಾಲ್ ಸೇವನೆಗೆ ಅವಕಾಶ ನೀಡಬಾರದು. ನಾವು ರಾಜ್ಯದಲ್ಲಿ ಮದ್ಯವನ್ನು ಉತ್ಪಾದಿಸಬಹುದು. ಅದನ್ನು ಇತರ ರಾಜ್ಯಗಳಿಗೆ ರಫ್ತು ಕೂಡ ಮಾಡಬಹುದು. ಆದರೆ ಮದ್ಯ ಸೇವನೆಗೆ ಮಾತ್ರ ಅನುಮತಿ ನೀಡಬಾರದು’ ಎಂದು ಶೇಟ್ ಒತ್ತಾಯಿಸಿದ್ದಾರೆ.