ಸಾರಾಂಶ
ಪಾತಕಿಗಳಿಗೆ ಎನ್‌ಕೌಂಟರ್ ಮೂಲಕ ಬಿಸಿಮುಟ್ಟಿಸಿ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿದ್ದ, ಕನ್ನಡಿಗ ಮುಂಬೈನ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ದಯಾ ನಾಯಕ್ ಜು.31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಮುಂಬೈ: ಪಾತಕಿಗಳಿಗೆ ಎನ್‌ಕೌಂಟರ್ ಮೂಲಕ ಬಿಸಿಮುಟ್ಟಿಸಿ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿದ್ದ, ಕನ್ನಡಿಗ ಮುಂಬೈನ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ದಯಾ ನಾಯಕ್ ಜು.31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅದಕ್ಕೂ 2 ದಿನ ಮುಂಚೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಎಸಿಪಿ ಹುದ್ದೆಗೆ ಬಡ್ತಿ ನೀಡಿದೆ.
ಈ ಬಗ್ಗೆ ದಯಾ ನಾಯಕ್ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಮೊದಲ ಬಾರಿಗೆ ಎಸಿಪಿ ಸಮವಸ್ತ್ರ ಧರಿಸುತ್ತಿದ್ದೇನೆ. ಶಾಶ್ವತವಾಗಿ ಅದನ್ನು ನೇತುಹಾಕುವ ಒಂದು ದಿನದ ಮೊದಲು. ಇದು ಕೊನೆಯಲ್ಲಿ ಬಂದಿರಬಹುದು. ಇದು ಬಡ್ತಿ ಮಾತ್ರವಲ್ಲದೇ ಜೀವಿತಾವಧಿಯ ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆ ಗುರುತಿಸುವ ಗೌರವ’ ಎಂದಿದ್ದಾರೆ.
ದಯಾ ನಾಯಕ್ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಮುಂಬೈಗೆ ಸ್ಥಳಾಂತರವಾಗಿದ್ದ ಅವರು 1995ರಲ್ಲಿ ಮಹಾರಾಷ್ಟ್ರದ ಜುಹು ಪೊಲೀಸ್ ಠಾಣೆಯಲ್ಲಿ ತಮ್ಮ ಜೀವನ ಆರಂಭಿಸಿದರು. ಅಲ್ಲಿಂದ ಸುದೀರ್ಘ ಮೂರು ದಶಕಗಳ ಕಾಲ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರು ಗುರುವಾರ ನಿವೃತ್ತರಾಗಲಿದ್ದಾರೆ. ಖಡಕ್ ಅಧಿಕಾರಿಯಾಗಿದ್ದ ಇವರು ಗ್ಯಾಂಗ್‌ಸ್ಟರ್‌ಗಳ ಶೂಟೌಟ್ ಮೂಲಕ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದರು.
87 ಗ್ಯಾಂಗ್‌ಸ್ಟರ್‌ಗಳಿಗೆ ಗುಂಡು:
ದಯಾ ನಾಯಕ್ ತಮ್ಮ ವೃತ್ತಿ ಜೀವನದಲ್ಲಿ 87 ಗ್ಯಾಂಗ್‌ಸ್ಟರ್‌ಗಳನ್ನು ಶೂಟೌಟ್ ಮಾಡಿದ್ದರು. ದಾವೂದ್ ಇಬ್ರಾಹಿಂ, ಅಮರ್ ನಾಯ್ಕ್, ಛೋಟಾ ರಾಜನ್ , ಅರುಣ್ ಗೌಳಿಯರಂತಹ ಪಾತಕಿಗಳ ನಂಟು ಹೊಂದಿದ್ದವರಿಗೆ ಗುಂಡು ಹಾರಿಸಿದ್ದರು.
ಹೈಪ್ರೊಫೈಲ್ ಕೇಸ್‌ಗಳ ತನಿಖೆ:
ಮುಂಬೈನಲ್ಲಿ ಅಪರಾಧ ವಿಭಾಗದ ಯೂನಿಟ್ ನಂ.9 ಮುಖ್ಯಸ್ಥರಾಗಿದ್ದ ಇವರು ಹೈ ಪ್ರೊಫೈಲ್ ಕೇಸ್‌ಗಳನ್ನು ನಿಭಾಯಿಸಿದ್ದರು. ಕಳೆದ ವರ್ಷ ಸಲ್ಮಾನ್ ಖಾನ್ ಬಾಂದ್ರಾ ನಿವಾಸದ ಮೇಲೆ ನಡೆದ ಶೂಟೌಟ್, ಸಲ್ಲು ಆಪ್ತ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ತನಿಖೆ, ನಟ ಸೈಫ್ ಅಲಿಖಾನ್ ಮೇಲಿನ ದಾಳಿ ಪ್ರಕರಣವನ್ನು ನಿಭಾಯಿಸಿದ್ದರು.
ಕಾಡಿತ್ತು ಅಮಾನತು ನೋವು:
2006ರಲ್ಲಿ ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ದಯಾ ನಾಯಕ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು, ಈ ಹಿನ್ನೆಲೆ ಎಸಿಬಿಯಿಂದ ಬಂಧನಕ್ಕೊಳಗಾಗಿ ಅಮಾನತಾಗಿದ್ದರು. ಸುಪ್ರೀಂ ಎಲ್ಲಾ ಆರೋಪಗಳನ್ನು ರದ್ದುಗೊಳಿಸಿತ್ತು. 2012ರಲ್ಲಿ ಸೇವೆಗೆ ಮರು ಸೇರ್ಪಡೆಗೊಂಡಿದ್ದರು.
ಸಿನಿಮಾವಾಗಿದ್ದ ವೃತ್ತಿ ಬದುಕು:
ಎನ್‌ಕೌಂಟರ್ ಸ್ಪೆಷಲಿಸ್ಟ್ ಅವರ ಜೀವನಗಾಥೆ ಹಲವು ಸಿನಿಮಾ ಕಥೆಗಳಿಗೆ ಸ್ಫೂರ್ತಿಯಾಗಿತ್ತು. ಬಾಲಿವುಡ್‌ನಲ್ಲಿ ಅಬ್ ತಕ್ ಛಪ್ಪನ್ ಮತ್ತು ಡಿಪಾರ್ಟ್‌ಮೆಂಟ್‌ನಂತಹ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಎನ್‌ಕೌಂಟರ್ ದಯಾ ನಾಯಕ್ ಚಿತ್ರ ಬಿಡುಗಡೆಯಾಗಿತ್ತು.
ಆರ್ಥಿಕ ಸಂಕಷ್ಟದಿಂದ ಮುಂಬೈಗೆ:
ಕಾರ್ಕಳದ ಬಡ ಕುಟುಂಬದಲ್ಲಿ ಹುಟ್ಟಿದ ದಯಾ ನಾಯಕ್ 1979ರಲ್ಲಿ ದುಡಿಮೆಗೆಂದು ಮುಂಬೈಗೆ ಸ್ಥಳಾಂತರವಾಗಿದ್ದರು. ಪ್ಲಂಬರ್ ಮತ್ತು ಕ್ಯಾಂಟೀನ್‌ನಲ್ಲಿ ಸಣ್ಣಪುಟ್ಟ ಕೆಲಸ ಆರಂಭಿಸಿ ಓದು ಕೂಡ ಮುಂದುವರೆಸಿದರು. ಪದವಿ ಮುಗಿಸಿ 1995ರಲ್ಲಿ ಮಹಾರಾಷ್ಟ್ರ ಪೊಲೀಸ್ ವಿಭಾಗದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಸೇರಿ, ದಕ್ಷತೆಯಿಂದ ಜನಪ್ರಿಯರಾದರು. ಇನ್ನು ದಯಾನಾಯಕ್ ತಮ್ಮ ಹುಟ್ಟೂರು ಎಣ್ಣೆಹೊಳೆಯಲ್ಲಿ ತಾಯಿ ರಾಧಾ ನಾಯಕ್ ಅವರ ಹೆಸರಿನಲ್ಲಿರುವ ಟ್ರಸ್ಟ್‌ನಿಂದ ಶಾಲೆಯೊಂದನ್ನು ಸ್ಥಾಪಿಸಿದ್ದಾರೆ.
ದುಡಿಮೆಗಾಗಿ ಮುಂಬೈಗೆ ತೆರಳಿ ಪ್ಲಂಬರ್, ಕ್ಯಾಂಟಿನ್ ಕೆಲಸ ಮಾಡಿದ್ದ ದಯಾನಾಯಕ್
ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿ ಮಹಾರಾಷ್ಟ್ರದಲ್ಲಿ ಪೊಲೀಸ್ ಹುದ್ದೆಗೆ ಸೇರ್ಪಡೆ
ಕರ್ತವ್ಯದ ವೇಳೆ ದಾವೂದ್, ಛೋಟಾ ರಾಜನ್ ಸೇರಿ ಗ್ಯಾಂಗ್ ಸದಸ್ಯರ ಮೇಲೆ ಗುಂಡೇಟು
3 ದಶಕ ಸೇವೆ. 87 ಶೂಟೌಟ್ ಮೂಲಕ ಎನ್‌ಕೌಂಟರ್ ಸ್ಪೆಷ್ಟಲಿಸ್ಟ್ ಎಂಬ ಖ್ಯಾತಿಗೆ ಪಾತ್ರ
ಭ್ರಷ್ಟಾಚಾರದ ಆರೋಪ ಕೇಸಲ್ಲಿ ಅಮನತಾಗಿ ಬಳಿಕ ಕ್ಲೀನ್‌ಚಿಟ್ ಪಡೆದಿದ್ದ ದಯಾನಾಯಕ್