ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಕಾಪ್ಟರ್‌ಗೆ ಜಾರ್ಖಂಡ್‌ನಲ್ಲಿ 2 ತಾಸು ಅನುಮತಿ ವಿಳಂಬ : ವಿವಾದ

| Published : Nov 16 2024, 12:33 AM IST / Updated: Nov 16 2024, 04:45 AM IST

ಸಾರಾಂಶ

ಟೇಕಾಫ್‌ಗೆ ಅನುಮತಿ ಇಲ್ಲದ ಕಾರಣ ಜಾರ್ಖಂಡ್‌ನ ಗೊಡ್ಡಾದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ ಸುಮಾರು 2 ಗಂಟೆಗಳ ಕಾಲ ನಿಂತ ಘಟನೆ ಶುಕ್ರವಾರ ನಡೆದಿದೆ.

ರಾಂಚಿ: ಟೇಕಾಫ್‌ಗೆ ಅನುಮತಿ ಇಲ್ಲದ ಕಾರಣ ಜಾರ್ಖಂಡ್‌ನ ಗೊಡ್ಡಾದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ ಸುಮಾರು 2 ಗಂಟೆಗಳ ಕಾಲ ನಿಂತ ಘಟನೆ ಶುಕ್ರವಾರ ನಡೆದಿದೆ. ಇದು ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಚುನಾವಣಾ ಆಯೋಗಕ್ಕೆ ದೂರಿದೆ.

ಜಾರ್ಖಂಡ್‌ ಪಕ್ಕದಲ್ಲೇ ಇರುವ ಬಿಹಾರದ ಜಮೂಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರ್‍ಯಾಲಿ ಶುಕ್ರವಾರ ಆಯೋಜನೆ ಆಗಿತ್ತು. ಅವರು ಜಾರ್ಖಂಡ್‌ನ ದೇವಗಢಕ್ಕೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ಜಮೂಯಿಗೆ ತೆರಳಿದ್ದರು ಹಾಗೂ ವಾಪಸು ದೇವಗಢದಿಂದ ವಿಮಾನದಲ್ಲಿ ದಿಲ್ಲಿಗೆ ತೆರಳುವವರಿದ್ದರು. ಆದರೆ ಮೋದಿ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದ ಕಾರಣ 2 ತಾಸು ಜಾರ್ಖಂಡ್‌ನ ಕೆಲ ಭಾಗಗಳಲ್ಲಿ ವಾಯುಸಂಚಾರ ನಿರ್ಬಂಧಿಸಲಾಗಿತ್ತು. 

ಹೀಗಾಗಿ ರಾಹುಲ್‌ ಕಾಪ್ಟರ್‌ಗೆ ಅನುಮತಿ ತಡೆಹಿಡಿಯಲಾಗಿತ್ತು ಎನ್ನಲಾಗಿದೆ. ನಂತರ 2 ತಾಸಿನ ವಿಳಂಬದ ಬಳಿಕ ಕಾಪ್ಟರ್‌ ಹಾರಾಟಕ್ಕೆ ಅನುಮತಿಸಲಾಯಿತು. ಅಲ್ಲಿಯವರೆಗೆ ರಾಹುಲ್‌ ಕಾಪ್ಟರ್‌ನಲ್ಲೇ ಸುಮ್ಮನೇ ಮೊಬೈಲ್‌ ನೋಡುತ್ತ ಕೂತಿದ್ದರು.ಇದಕ್ಕೆ ಕಾಂಗ್ರೆಸ್‌ ಪಕ್ಷ ಆಕ್ಷೇಪಿಸಿದ್ದು, ‘ಮಧ್ಯಾಹ್ನ 1.15ಕ್ಕೆ ಗೊಡ್ಡಾದಿಂದ ಹೊರಡಲು ರಾಹುಲ್‌ಗೆ ಪೂರ್ವಾನುಮತಿ ಸಿಕ್ಕಿತ್ತು. ಆದರೆ ಕೊನೇ ಕ್ಷಣದಲ್ಲಿ ಇತರ ನಾಯಕರ ವಾಯುಸಂಚಾರ ಇದೆ ಎಂಬ ಕಾರಣ ನೀಡಿ ಅನುಮತಿ ತಡೆಹಿಡಿದಿದ್ದು ರಾಜಕೀಯ ಪ್ರೇರಿತ. ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಕ್ಕೆ ಅವಕಾಶ ನೀಡಬೇಕು’ ಎದು ಚುನಾವಣಾ ಆಯೋಗಕ್ಕೆ ದೂರಿದೆ.

ಈ ನಡುವೆ ಜಾರ್ಖಂಡ್‌ ಕಾಂಗ್ರೆಸ್‌ ನಾಯಕಿ ದೀಪಿಕಾ ಪಾಂಡೆ ಮಾತನಾಡಿ, ‘ಇದು ಉದ್ದೇಶಪೂರ್ವಕವಾಗಿ ಬಿಜೆಪಿ ಮಾಡಿದ ಅಡ್ಡಿ. ದೇಶದಲ್ಲಿ ಮುಕ್ತವಾಗಿ ಪ್ರಚಾರ ಮಾಡುವ ಹಕ್ಕು ಕೇವಲ ಮೋದಿಗೆ ಮಾತ್ರವೇ’ ಎಂದಿದ್ದಾರೆ.