ಸಾರಾಂಶ
ಸುಪ್ರೀಂ ಕೋರ್ಟ್ ಕುರಿತು ಪಕ್ಷದ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರು ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ ನಡೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿ: ಸುಪ್ರೀಂ ಕೋರ್ಟ್ ಕುರಿತು ಪಕ್ಷದ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರು ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ ನಡೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ‘ಹಾನಿ ನಿಯಂತ್ರಣ ಕ್ರಮ’ (ಡ್ಯಾಮೇಜ್ ಕಂಟ್ರೋಲ್) ಎಂದು ಕರೆದಿರುವ ಕಾಂಗ್ರೆಸ್, ಸಂಸದರಿಬ್ಬರನ್ನು ಪಕ್ಷದಿಂದ ಕನಿಷ್ಠ ಉಚ್ಚಾಟಿಸುವವಂಥ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದೆ.
ರಾಷ್ಟ್ರಪತಿಗಳಿಗೆ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು 3 ತಿಂಗಳ ಕಾಲಮಿತಿ ಹಾಗೂ ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರವಾಗಿ ಸರ್ಕಾರಕ್ಕೆ ಮೂಗುದಾರ ಹಾಕಲು ಹೊರಟ ಸುಪ್ರೀಂ ಕೋರ್ಟ್ ವಿರುದ್ಧ ಸಂಸದ ನಿಶಿಕಾಂತ್ ದುಬೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೋರ್ಟೇ ಕಾಯ್ದೆ ಮಾಡುವುದಾದರೆ ವಿಧಾನಸಭೆ, ಸಂಸತ್ತಿನ ಅಗತ್ಯವೇ ಇಲ್ಲ ಎಂದು ಕಿಡಿಕಾರಿದ್ದರು. ಇದಕ್ಕೆ ಸಂಸದ ದಿನೇಶ್ ಶರ್ಮಾ ಕೂಡ ದನಿಗೂಡಿಸಿದ್ದರು.
ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಬಿಜೆಪಿ ಈ ಇಬ್ಬರೂ ಸಂಸದರ ವಿರುದ್ಧ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ, ಶೋಕಾಸ್ ನೋಟಿಸ್ ಯಾಕೆ ಜಾರಿ ಮಾಡಿಲ್ಲ? ಸಂಸದರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ನೀಡಿದ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಆದರೆ ಇನ್ನೇನು ಅಧಿಕಾರದಿಂದ ಕೆಳಗಿಳಿಯಲಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅಂತರ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ. ದ್ವೇಷ ಭಾಷಣದ ವಿಚಾರದಲ್ಲಿ ಇವರು ಪದೇ ಪದೆ ಈ ರೀತಿಯ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಅಲ್ಲದೆ, ಬೇರೆ ಸಮುದಾಯಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ವಾಗ್ದಾಳಿಗೆ ಇವರನ್ನು ಬಳಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿಯು ಯಾರಿಗೂ ಮೋಸ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಮೌನನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಒವೈಸಿ ಗರಂ:
ದುಬೆ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ‘ಟ್ಯೂಬ್‌ಲೈಟ್ ಥರ ವರ್ತಿಸಬೇಡಿ. ಸಂವಿಧಾನದ 142 ನೇ ವಿಧಿಯನ್ನು (ಇದು ಸುಪ್ರೀಂ ಕೋರ್ಟ್‌ಗೆ ವಿಶೇಷ ಅಧಿಕಾರವನ್ನು ನೀಡುತ್ತದೆ) ಬಿ.ಆರ್. ಅಂಬೇಡ್ಕರ್ ತಂದಿದ್ದರು. ಅಂಬೇಡ್ಕರ್ ನಿಮಗಿಂತ ಹೆಚ್ಚು ದೂರದೃಷ್ಟಿಯುಳ್ಳವರಾಗಿದ್ದರು. ಆದರೆ ಈಗ ನೀವು ಕೋರ್ಟುಗಳಿಗೆ ಬೆದರಿಕೆ ಹಾಕುತ್ತಿದ್ದೀರಾ?’ ಎಂದಿದ್ದಾರೆ.
ಅಖಿಲೇಶ್ ಯಾದವ್ ಮಾತನಾಡಿ, ‘ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಯಾರಾದರೂ ವಿಭಜನೆ ಮಾಡುತ್ತಿದ್ದರೆ ಅದು ಬಿಜೆಪಿ. ಇದರ ಹೆಸರಿನಲ್ಲಿ ಬಿಜೆಪಿಯು ಯೋಜಿತವಾಗಿ ವಿಭಜನೆ ಮಾಡುತ್ತದೆ’ ಎಂದಿದ್ದಾರೆ.
ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಯತ್ನ
ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಅಟಾರ್ನಿ ಜನರ್ ಆರ್.ವೆಂಕಟರಮಣಿ ಅವರಿಗೆ ವಕೀಲರೊಬ್ಬರು ಪತ್ರ ಬರೆದಿದ್ದಾರೆ.ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಕೀಲ ಅನಾಸ್ ತನ್ವೀರ್ ಅವರು ಈ ಪತ್ರ ಬರೆದಿದ್ದಾರೆ. ದುಬೆ ಅವರ ಹೇಳಿಕೆಯನ್ನು ತೀವ್ರ ಮಾನಹಾನಕಾರಿ ಮತ್ತು ತೀವ್ರ ಪ್ರಚೋದನಕಾರಿ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಸಂಸದರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ 1971ರ 15(ಬಿ) ನಿಯಮದ ಪ್ರಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸಾಲಿಸಿಟರ್ ಜನರಲ್ ಅಥವಾ ಅಟಾರ್ನಿ ಜನರಲ್ ಅನುಮತಿ ಕಡ್ಡಾಯವಾಗಿದೆ.
ಪತ್ರದಲ್ಲೇನಿದೆ?: ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 15(1)(ಬಿ) ಪ್ರಕಾರ, 1975ರ ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನೆ ಕಾಯ್ದೆ 1975ರ ಪ್ರಕ್ರಿಯೆಯ ನಿಮಯ 3(ಸಿ)ದಂತೆ, ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರುತ್ತಿದ್ದೇನೆ. ದುಬೆ ಅವರು ಸಾರ್ವಜನಿಕವಾಗಿ ಮಾಡಿದ ಹೇಳಿಕೆಯು ವಿವಾದಾತ್ಮಕವಾಗಿದೆ, ಆತಂಕ ಮೂಡಿಸುವಂತಿದೆ, ತಪ್ಪುದಾರಿಗೆಳೆಯುವಂತಿದೆ ಮತ್ತು ಸುಪ್ರೀಂ ಕೋರ್ಟ್‌ನ ಘನತೆ, ಅಧಿಕಾರಕ್ಕೆ ಕುಂದುಂಟು ಮಾಡುವಂತಿದೆ ಎಂದಿದ್ದಾರೆ.
ದುಬೆ ಅವರು ಸಿಜೆಐ ಸಂಜೀವ್ ಖನ್ನಾ ಅವರು ದೇಶದಲ್ಲಿ ಅಂತರ್‌ಯುದ್ಧಕ್ಕೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ, ದುಬೆ ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶ ಹಿನ್ನೆಲೆಯಲ್ಲಿ ಕೋಮುದ್ವೇಷದ ಹೇಳಿಕೆಯನ್ನೂ ನೀಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.ಸುಪ್ರೀಂ ಕೋರ್ಟ್ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಮತ್ತು ಮುಖ್ಯ ನ್ಯಾಯಮೂರ್ತಿ ಅವರು ದೇಶದಲ್ಲಿನ ಅಂತರ್ಯುದ್ಧಕ್ಕೆ ಕಾರಣ ಎಂದು ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು. ಜತೆಗೆ, ಸುಪ್ರೀಂ ಕೋರ್ಟ್ ಕಾನೂನು ರೂಪಿಸುವುದಾದರೆ ವಿಧಾನಸಭೆ ಮತ್ತು ಸಂಸತ್ತು ಯಾಕೆ ಬೇಕು ಎಂದೂ ಕಿಡಿಕಾರಿದ್ದರು. ಈ ಕುರಿತು ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರೆ, ಬಿಜೆಪಿ ಮಾತ್ರ ಈ ಹೇಳಿಕೆಗೂ ತನಗೂ ಸಂಬಂಧ ಇಲ್ಲ ಎಂದು ಅಂತರ ಕಾಯ್ದುಕೊಂಡಿತ್ತು.
ಖುರೇಶಿ ಚುನಾವಣಾ ಆಯುಕ್ತ ಅಲ್ಲ, ಮುಸ್ಲಿಂ ಆಯುಕ್ತರಾಗಿದ್ದರು: ದುಬೆ
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ಕಿಡಿಕಾರಿ ಸುದ್ದಿಯಲ್ಲಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಇದೀಗ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಖುರೇಶಿ ಅವರು ಎಲೆಕ್ಷನ್ ಕಮಿಷನರ್ ಆಗಿರಲಿಲ್ಲ, ಮುಸ್ಲಿಂ ಕಮಿಷನರ್ ಆಗಿದ್ದರು’ ಎಂದು ಆರೋಪಿಸಿದ್ದಾರೆ.
ತಾವು ಪ್ರತಿನಿಧಿಸುವ ಗೊಡ್ಡಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಾರ್ಖಂಡ್‌ನ ಸಂಥಾಲ್ ಪರಗಣದಲ್ಲಿ ಬಾಂಗ್ಲಾದೇಶಿಯರಿಗೆ ಅತಿ ಹೆಚ್ಚು ವೋಟರ್ ಐಡಿ ನೀಡಿದ್ದೇ ಖುರೇಶಿ ಕಾಲದಲ್ಲಿ ಎಂದು ದುಬೆ ಆರೋಪಿಸಿದ್ದಾರೆ.ಖುರೇಶಿ ವಿರುದ್ಧ ಯಾಕೆ ಕಿಡಿ?:
ವಿವಾದಿತ ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಮುಸ್ಲಿಮರ ಜಾಗ ಅತಿಕ್ರಮಿಸಲು ಉದ್ದೇಶಿಸಿದೆ. ಕೇಂದ್ರ ಸರ್ಕಾರದ ಈ ದುಷ್ಟಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡುವ ವಿಶ್ವಾಸವಿದೆ ಎಂದು ಖುರೇಶಿ ಹೇಳಿದ್ದರು.ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಶಿಕಾಂತ್ ದುಬೆ ತೀವ್ರ ಕಿಡಿಕಾರಿದ್ದು, ‘ನೀವು ಚುನಾವಣಾ ಆಯುಕ್ತರಲ್ಲ, ನೀವು ಮುಸ್ಲಿಂ ಕಮಿಷನರ್ ಆಗಿದ್ದೀರಿ. ನಿಮ್ಮ ಕಾಲಾವಧಿಯಲ್ಲಿ ಜಾರ್ಖಂಡ್‌ನ ಸಂಥಾಲ್ ಪರಗಣದಲ್ಲಿ ಅತಿಹೆಚ್ಚು ಬಾಂಗ್ಲಾದೇಶಿ ನುಸುಳುಕೋರರಿಗೆ ವೋಟರ್ ಕಾರ್ಡ್ ನೀಡಲಾಗಿತ್ತು’ ಎಂದು ಆರೋಪಿಸಿದ್ದಾರೆ.
==‘ಇಸ್ಲಾಂ ಭಾರತಕ್ಕೆ ಕಾಲಿಟ್ಟದ್ದು ಕ್ರಿಸ್ತಶಕ 712ರಲ್ಲಿ. ಅದಕ್ಕೂ ಮೊದಲೇ ಈ ಭೂಮಿ ಹಿಂದೂಗಳಿಗೆ ಅಥವಾ ಗುಡ್ಡಗಾಡು ಜನರು, ಜೈನರು, ಬೌದ್ಧರಿಗೆ ಸೇರಿದ್ದಾಗಿತ್ತು. ನಮ್ಮ ಗ್ರಾಮ ವಿಕ್ರಮಶಿಲವನ್ನು ಬಕ್ತಿಯಾರ್ ಖಿಲ್ಜಿ 1189ರಲ್ಲಿ ಸುಟ್ಟುಹಾಕಿದ್ದ. ಅತಿಶ ದೀಪಾಂಕರ್ ರೂಪದಲ್ಲಿ ವಿಶ್ವಕ್ಕೆ ಮೊದಲ ಕುಲಪತಿ ನೀಡಿದ ಕೀರ್ತಿ ವಿಕ್ರಮಶಿಲಕ್ಕಿದೆ. ನೀವು ದೇಶವನ್ನು ಒಗ್ಗೂಡಿಸಿ, ಇತಿಹಾಸ ಓದಿರಿ. ವಿಭಜನೆಯಿಂದ ಪಾಕಿಸ್ತಾನದ ಸೃಷ್ಟಿಯಾಯಿತು, ಇನ್ನು ಮುಂದೆ ಯಾವುದೇ ವಿಭಜನೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.