ಪಾಕಿಸ್ತಾನದ ಪ್ರತಿ ಇಂಚು ಭೂಪ್ರದೇಶವೂ ಬ್ರಹ್ಮೋಸ್‌ನ ಕಣ್ಣಳತೆಯಲ್ಲಿದೆ. ಆಪರೇಷನ್‌ ಸಿಂದೂರದಲ್ಲಿ ತೋರಿಸಿದ್ದು ಬರೀ ಟ್ರೈಲರ್‌ ಮಾತ್ರ. ಪಾಕಿಸ್ತಾನವನ್ನು ಸೃಷ್ಟಿಸಲು ಸಾಧ್ಯವಾಗಿರುವ ಭಾರತಕ್ಕೆ, ಅದನ್ನು ನಾಶಪಡಿಸುವ ಶಕ್ತಿಯೂ ಇದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ನ ಪ್ರತಿ ಇಂಚು ಬ್ರಹ್ಮೋಸ್‌ನ ಕಣ್ಣಳತೆಯಲ್ಲಿದೆ: ಸಿಂಗ್‌

ಸಿಂದೂರದಲ್ಲಿ ತೋರಿಸಿದ್ದು ಟ್ರೈಲರ್‌ ಅಷ್ಟೆ: ಪಾಕ್‌ಗೆ ಎಚ್ಚರಿಕೆ

ಪಿಟಿಐ ಲಖನೌ

ಪಾಕಿಸ್ತಾನದ ಪ್ರತಿ ಇಂಚು ಭೂಪ್ರದೇಶವೂ ಬ್ರಹ್ಮೋಸ್‌ನ ಕಣ್ಣಳತೆಯಲ್ಲಿದೆ. ಆಪರೇಷನ್‌ ಸಿಂದೂರದಲ್ಲಿ ತೋರಿಸಿದ್ದು ಬರೀ ಟ್ರೈಲರ್‌ ಮಾತ್ರ. ಪಾಕಿಸ್ತಾನವನ್ನು ಸೃಷ್ಟಿಸಲು ಸಾಧ್ಯವಾಗಿರುವ ಭಾರತಕ್ಕೆ, ಅದನ್ನು ನಾಶಪಡಿಸುವ ಶಕ್ತಿಯೂ ಇದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಲಖನೌನ ಸರೋಜಿನಿ ನಗರದ ಬ್ರಹ್ಮೋಸ್‌ ಏರೋಸ್ಪೇಸ್‌ ಘಟಕದಲ್ಲಿ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಜೊತೆಗೂಡಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಕ್‌ ಭೂಪ್ರದೇಶದ ಪ್ರತಿ ಇಂಚೂ ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿ ಬರುತ್ತದೆ. ಆಪರೇಷನ್‌ ಸಿಂದೂರದಲ್ಲಿ ಏನಾಯಿತೋ ಅದು ಬರೀ ಟ್ರೈಲರ್‌ ಅಷ್ಟೆ. ಭಾರತಕ್ಕೆ ಪಾಕಿಸ್ತಾನವನ್ನು ಸೃಷ್ಟಿಸಲು ಸಾಧ್ಯವಾದರೆ, ಸಮಯ ಬಂದರೆ ಅದನ್ನು.. ನಾನು ಹೆಚ್ಚೇನೂ ಹೇಳುವುದಿಲ್ಲ. ಅದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ವಿಜಯ ಎಂಬುದು ನಮಗೆ ಬರೀ ಒಂದು ಘಟನೆಯಲ್ಲ, ಅದು ನಮ್ಮ ಹವ್ಯಾಸವೇ ಆಗಿದೆ ಎಂಬುದನ್ನು ಆಪರೇಷನ್‌ ಸಿಂದೂರ ಸಾಬೀತುಪಡಿಸಿದೆ’ ಎಂದರು.

‘ಬ್ರಹ್ಮೋಸ್‌ ಕೇವಲ ಒಂದು ಕ್ಷಿಪಣಿಯಲ್ಲ, ಇದು ಭಾರತದ ರಾಜತಾಂತ್ರಿಕ ವಿಶ್ವಾಸದ ಪುರಾವೆ. ಸೇನೆಯಿಂದ ಹಿಡಿದು ನೌಕಾದಳ, ವಾಯುಪಡೆಯವರೆಗೆ ಬ್ರಹ್ಮೋಸ್‌ ನಮ್ಮ ರಕ್ಷಣಾ ಪಡೆಗಳ ಮುಖ್ಯ ಆಧಾರಸ್ತಂಭವಾಗಿದೆ. ಭಾರತ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತದೆ ಎಂಬ ನಮ್ಮ ನಂಬಿಕೆಗೆ ಬ್ರಹ್ಮೋಸ್‌ ಬಲ ತುಂಬಿದೆ’ ಎಂದು ಬಣ್ಣಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲ್ಲಿ ಪಹಲ್ಗಾಂನಲ್ಲಿ ಪಾಕ್‌ ಉಗ್ರರ ದಾಳಿ ನಡೆಸಿದ್ದರು. ಅದಾದ ಬೆನ್ನಲ್ಲೇ ಮೇ 7 ಮತ್ತು 8ರಂದು ಪಾಕಿಸ್ತಾನದ ಮೇಲೆ ಭಾರತ ಆಪರೇಷನ್‌ ಸಿಂದೂರ ಹೆಸರಲ್ಲಿ ವಾಯುದಾಳಿ ನಡೆಸಿತ್ತು. ಅದಾದ 3 ದಿನಗಳಲ್ಲಿ ಅಂದರೆ ಮೇ 11ರಂದು ಲಖನೌದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿತ್ತು. ಅದಾದ ಕೇವಲ 5 ತಿಂಗಳಲ್ಲಿ ಅಲ್ಲಿಂದ ಮೊದಲ ಬ್ಯಾಚ್‌ನ ಕ್ಷಿಪಣಿ ಉತ್ಪಾದಿಸಲಾಗಿದೆ.

==

ಪ್ರಚೋದಿಸಿದ್ರೆ ನಿರ್ಣಾಯಕ ಉತ್ತರ: ಭಾರತಕ್ಕೆ ಪಾಕ್‌ ಅಣ್ವಸ್ತ್ರ ಬೆದರಿಕೆ

ಇಸ್ಲಾಮಾಬಾದ್‌: ಭಾರತೀಯ ಸೇನೆಯ ಅಬ್ಬರ ಸಹಿಸಲಾಗದೆ ಕದನವಿರಾಮಕ್ಕಾಗಿ ಅಂಗಲಾಚಿ, ಬಳಿಕ ಆ ಕದನದಲ್ಲಿ ತಾವೇ ಜಯಿಸಿದೆವು ಎಂದು ಬೀಗುತ್ತಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್‌, ‘ಭಾರತ ಮತ್ತೇನಾದರೂ ಸಣ್ಣ ಪ್ರಚೋದನೆ ಮಾಡಿದರೂ ನಾವು ನಿರ್ಣಾಯಕ ಉತ್ತರ ನೀಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.ಪಾಕ್‌ ಸೇನಾ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುನೀರ್‌, ‘ಅಣುಶಕ್ತ ರಾಷ್ಟ್ರಗಳ ನಡುವೆ ಯುದ್ಧಕ್ಕೆ ಯಾವುದೇ ಅವಕಾಶವಿಲ್ಲ. ಒಂದೊಮ್ಮೆ ಸಂಘರ್ಷ ಶುರುವಾದರೆ ಅದು ಅಣುದಾಳಿಗೆ ಎಡೆಮಾಡಿಕೊಡುತ್ತದೆ. ಒಂದೊಮ್ಮೆ ಭಾರತ ಸಣ್ಣ ಪ್ರಚೋದನೆಯನ್ನು ನೀಡಿದರೂ ಭಯಪಡದೆ ನಾವದಕ್ಕೆ ನಿರ್ಣಾಯಕ ಪ್ರತಿಕ್ರಿಯೆ ಕೊಡುತ್ತೇವೆ’ ಎಂದು ಪೌರುಷದ ಮಾತುಗಳನ್ನಾಡಿದ್ದಾರೆ.

ಆಪರೇಷನ್‌ ಸಿಂದೂರಕ್ಕೆ ಪ್ರತಿಯಾಗಿ ಭಾರತಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ನಮ್ಮ ಸಾಮರ್ಥ್ಯ ಪ್ರದರ್ಶಿಸಿದೆವು ಎಂದಿರುವ ಅವರು, ಪಾಕ್‌ ಅನ್ನು ಸ್ಥಿರಗೊಳಿಸಲು ಭಾರತ ಉಗ್ರವಾದವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಕಾಶ್ಮೀರದ ವಿಷಯವನ್ನೂ ಎತ್ತುತ್ತಾ, ‘ಭಾರತ ಆ ಸಮಸ್ಯೆಯನ್ನು ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಬಗೆಹರಿಸಿಕೊಳ್ಳಬೇಕು. ನಾವು ಜಮ್ಮು ಕಾಶ್ಮೀರದ ಜನರಿಗೆ ನೈತಿಕ ಹಾಗೂ ರಾಜತಾಂತ್ರಿಕ ಬೆಂಬಲ ನೀಡುವುದನ್ನು ಮುಂದುವರೆಸುತ್ತೇವೆ’ ಎಂದು ಹೇಳಿದ್ದಾರೆ.