ಸಾರಾಂಶ
ಕಾನ್ಪುರ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯುವ ದಿನದಂದೇ (ಜ.22) ತಮಗೆ ಹೆರಿಗೆ ಮಾಡಿಸಬೇಕೆಂದು ವೈದ್ಯರಿಗೆ ಗರ್ಭಿಣಿಯರು ದುಂಬಾಲು ಬೀಳುತ್ತಿರುವ ಕುತೂಹಲಕರ ಪ್ರಸಂಗಳು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿವೆ.
‘ಕಾನ್ಪುರದ ಗಾಯತ್ರಿ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಆಸ್ಪತ್ರೆಯಲ್ಲಿ ಜ.22ರಂದೇ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಂತೆ ನಮಗೆ 12ರಿಂದ 14 ಕೋರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಒಂದೇ ದಿನ 35 ಸಿಸೇರಿಯನ್ ಹೆರಿಗೆ ಮಾಡಿಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಸ್ಪತ್ರೆಯ ಸ್ತ್ರೀರೋಗ ಹೆರಿಗೆ ತಜ್ಞೆ ಡಾ.ಸೀಮಾ ದ್ವಿವೇದಿ ತಿಳಿಸಿದ್ದಾರೆ.
ಜ.22ರಂದು ರಾಮಮಂದಿರ ಲೋಕಾರ್ಪಣೆ ನಡೆಯಲಿದ್ದು, ಅಂದೇ ತಮ್ಮ ಗರ್ಭದಲ್ಲಿ ಮಗು ಜನಿಸುವುದು ಶುಭಕರ ಮತ್ತು ಶ್ರೇಷ್ಠ ಎಂದು ಭಾವಿಸಿರುವ ಮಹಿಳೆಯರು ಈ ರೀತಿ ದುಂಬಾಲು ಬಿದ್ದಿದ್ದಾರೆ. ಅಂದು ಜನಿಸಿದ ಮಗುವು ಜೀವನದಲ್ಲಿ ಶ್ರೀರಾಮನ ರೀತಿಯಲ್ಲೇ ಸಹನೆ, ಪ್ರೀತಿ ಮತ್ತು ಮಾನವೀಯ ಗುಣಗಳನ್ನು ಹೊಂದುತ್ತವೆ ಎಂದು ಮಹಿಳೆಯರು ಭಾವಿಸಿದ್ದಾರೆ.
ಹೀಗಾಗಿ ಅಂದೇ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ ಎಂದು ಡಾ। ದ್ವಿವೇದಿ ಹೇಳಿದ್ದಾರೆ.ಗರ್ಭಿಣಿ ಮಾಲತಿ ದೇವಿ (26) ಎಂಬಾಕೆ ಮಾತನಾಡಿ, ‘ನನಗೆ ಜ.17ರ ಡೇಟ್ ನೀಡಿದ್ದಾರೆ. ಆದರೆ ಇದರ ಬದಲಿಗೆ ಹೇಗಾದರೂ ಮಾಡಿ ತಡವಾಗಿ ಜ.22ಕ್ಕೆ ಹೆರಿಗೆ ಮಾಡಿಸಿ ಎಂದು ಕೇಳಿಕೊಂಡಿದ್ದೇನೆ. ಅಂದು ಮಗು ಜನಿಸಿದರೆ ಅದು ಯಶಸ್ಸಿನ ಉತ್ತುಂಗಕ್ಕೇರುತ್ತದೆ’ ಎಂದಿದ್ದಾರೆ.