ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ರೈಲು ಚಾಲಕರಿಗೆ ಸಾಫ್ಟ್‌ ಡ್ರಿಂಕ್ಸ್‌ ಸೇವನೆ ನಿಷೇಧ

| N/A | Published : Feb 21 2025, 12:49 AM IST / Updated: Feb 21 2025, 04:34 AM IST

ಸಾರಾಂಶ

ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ಲೋಕೋ ಪೈಲಟ್‌ಗಳು ಎಳನೀರು, ಕೆಲ ಪಾನೀಯ ಹಾಗೂ ಹಣ್ಣುಗಳು, ಕೆಮ್ಮಿನ ಸಿರಪ್‌, ಹೋಮಿಯೋಪತಿ ಔಷಧಿಗಳ ಸೇವಿಸುವುದನ್ನು ಹಾಗೂ ಮೌತ್‌ ವಾಷ್‌ ಬಳಸುವುದನ್ನು ನಿಷೇಧಿಸಲಾಗಿದೆ.

ತಿರುವನಂತಪುರಂ: ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ಲೋಕೋ ಪೈಲಟ್‌ಗಳು ಎಳನೀರು, ಕೆಲ ಪಾನೀಯ ಹಾಗೂ ಹಣ್ಣುಗಳು, ಕೆಮ್ಮಿನ ಸಿರಪ್‌, ಹೋಮಿಯೋಪತಿ ಔಷಧಿಗಳ ಸೇವಿಸುವುದನ್ನು ಹಾಗೂ ಮೌತ್‌ ವಾಷ್‌ ಬಳಸುವುದನ್ನು ನಿಷೇಧಿಸಲಾಗಿದೆ. ಕಾರಣ, ಇವುಗಳಿಂದಾಗಿ ಅವರ ಉಸಿರಾಟದ ಪರೀಕ್ಷೆ ನಡೆಸಿದಾಗ ಯಂತ್ರ ದೋಷದಿಂದ ಅದರಲ್ಲಿ ಮದ್ಯದ ಅಂಶ ಇದೆ ಎಂಬ ಫಲಿತಾಶ ಬರುತ್ತಿದ್ದು, ಇದರಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ‘ಸಿಬ್ಬಂದಿ ಕೆಲಸಕ್ಕೆ ಹಾಜರಾದಾಗ ಹಾಗೂ ಕೆಲಸ ಮುಗಿಸಿ ಹೊರಡುವಾಗ ನಡೆಸಲಾಗುವ ಉಸಿರಾಟ ಪರೀಕ್ಷೆಯಲ್ಲಿ ಮದ್ಯದ ಅಂಶ ಪತ್ತೆಯಾಗುತ್ತಿದೆ. ಹಾಗಾಗಿ ಪಟ್ಟಿ ಮಾಡಲಾದ ಪದಾರ್ಥಗಳ ಸೇವನೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಅವುಗಳ ಸೇವನೆ ಅನಿವಾರ್ಯವಿದ್ದಲ್ಲಿ ಮೊದಲೇ ಸಾಕ್ಷಿಯೊಂದಿಗೆ ಮಾಹಿತಿ ನೀಡಬೇಕು’ ಎಂದು ಅದರಲ್ಲಿ ಸೂಚಿಸಲಾಗಿದೆ.

ಉ.ಖಂಡ: ಪರರಾಜ್ಯದವರು ಕೃಷಿ ಭೂಮಿ ಖರೀದಿಗೆ ನಿಷೇಧ

ಡೆಹ್ರಾಡೂನ್‌: ಕೃಷಿ ಭೂಮಿಯ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಉತ್ತರಾಖಂಡದ ಪುಷ್ಕರ್‌ ಸಿಂಗ್‌ ಧಾಮಿ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿರುವ 13 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಪರರಾಜ್ಯದವರು ಕೃಷಿ ಭೂಮಿ ಖರೀದಿಸುವುದನ್ನು ನಿಷೇಧಗೊಳಿಸುವ ಮಸೂದೆಯನ್ನು ಸರ್ಕಾರ ಮಂಡಿಸಲಿದೆ. 

ಈಗಾಗಲೇ ಕರಡು ಮಸೂದೆಗೆ ಸಂಪುಟ ಅನುಮೋದನೆ ನೀಡಿದ್ದು, ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಹರಿದ್ವಾರ ಮತ್ತು ಉಧಂ ಸಿಂಗ್‌ ನಗರ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕ 11 ಜಿಲ್ಲೆಗಳಲ್ಲಿ ಪರ ರಾಜ್ಯದವರು ಕೃಷಿ ಭೂಮಿ ಖರೀದಿಯನ್ನು ಈ ಮಸೂದೆ ನಿಷೇಧಿಸುತ್ತದೆ. ಆದರೆ ಗೃಹ ನಿರ್ಮಾಣಕ್ಕೆ ಯಾವುದೇ ತೊಂದರೆಯಿರುವುದಿಲ್ಲ. ಜೊತೆಗೆ ಭೂಮಿ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಯ ಅಧಿಕಾರವನ್ನು ಮೊಟಕುಗೊಳಿಸಿ, ರಾಜ್ಯ ಸರ್ಕಾರಕ್ಕೆ ವರ್ಗಾಯಿಸುತ್ತದೆ.

ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅಸ್ತು ಎಂದ ಲೋಕಪಾಲಕ್ಕೆ ಸುಪ್ರೀಂ ಚಾಟಿ

ನವದೆಹಲಿ: ಹೈಕೋರ್ಟ್ ಹಾಲಿ ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಗೆ ಅನುಮತಿ ನೀಡಿದ ಲೋಕಪಾಲರ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಇದು ಅಕ್ರಮವಾಗಿದ್ದು, ಇಂಥ ಪ್ರವೃತ್ತಿಯು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದೆ.2013ರ ಲೋಕಾಯುಕ್ತ ಹಾಗೂ ಲೋಕಪಾಲ ಕಾಯ್ದೆಯಲ್ಲಿ ಹೈಕೋರ್ಟ್‌ ಹಾಲಿ ಜಡ್ಜ್‌ಗಳು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ಲೋಕಪಾಲರು ಹೈಕೋರ್ಟ್‌ ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಹೇಳಿತು.

ಬಳಿಕ ಕೇಂದ್ರ ಸರ್ಕಾರ ಹಾಗೂ ಲೋಕಪಾಲ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿತು.

ಪನಾಮಾದಲ್ಲಿರುವ ಭಾರತೀಯ ವಲಸಿಗರು ಸುರಕ್ಷಿತ: ಭಾರತ

ನವದೆಹಲಿ: ಅಮೆರಿಕದಿಂದ ಗಡೀಪಾರಾಗಿರುವ ಕೆಲ ಭಾರತೀಯ ಅಕ್ರಮ ವಲಸಿಗರನ್ನು ಪನಾಮಾದ ಹೋಟೆಲ್‌ ಒಂದರಲ್ಲಿ ಇರಿಸಲಾಗಿದ್ದು, ಅವರೆಲ್ಲಾ ಸುರಕ್ಷಿತರಾಗಿದ್ದಾರೆ ಎಂದು ಪನಾಮಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.ಕೆಲ ವಲಸಿಗರು ಹೋಟೆಲ್‌ನ ಕಿಟಕಿ ಬಳಿ ನಿಂತು ‘ಕಾಪಾಡಿ’ ಎಂದು ಕೋರಿಕೊಂಡ ಬೆನ್ನಲ್ಲೇ, ರಾಯಭಾರ ಕಚೇರಿ ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ, ‘ಅಮೆರಿಕದಿಂದ ಪನಾಮಾಕ್ಕೆ ತಲುಪಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಅಲ್ಲಿನ ಹೊಟೆಲ್‌ನಲ್ಲಿ ಎಲ್ಲಾ ಸೌಕರ್ಯಗಳೂ ಲಭ್ಯವಿದೆ. ಅವರ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಲಾಗಿದೆ.

ವಲಸಿಗರನ್ನು ಸೇನಾ ವಿಮಾನಗಳಲ್ಲಿ ನೇರವಾಗಿ ಭಾರತಕ್ಕೆ ಕಳಿಸುವುದು ಸುದೀರ್ಘ ಹಾಗೂ ಅಧಿಕ ಖರ್ಚಿನ ಪ್ರಕ್ರಿಯೆಯಾಗಿರುವುದರಿಂದ ಅಮೆರಿಕ ಅವರನ್ನೆಲ್ಲಾ ಮೊದಲು ಪನಾಮಾ, ಕೋಸ್ಟರಿಕಾಗಳಲ್ಲಿ ಇಳಿಸಿ, ಬಳಿಕ ವಾಣಿಜ್ಯ ವಿಮಾನಗಳಲ್ಲಿ ಅವರವರ ದೇಶಗಳಿಗೆ ಕಳಿಸಿಕೊಡಲಿದೆ.

ಔಷಧಗಳ ಮೇಲೆ ಟ್ರಂಪ್‌ ಶೇ.25 ತೆರಿಗೆ: ಭಾರತಕ್ಕೆ ಹೊಡೆತ ಬೀಳುವ ಸಂಭವ 

ನವದೆಹಲಿ: ಅಧಿಕಾರ ವಹಿಸಿಕೊಂಡ ಬಳಿಕ ವಿದೇಶಿ ವಸ್ತುಗಳ ಮೇಲೆ ಒಂದರ ಮೇಲೊಂದು ತೆರಿಗೆ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಔಷಧಿಗಳ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಹಾಕಲು ಮುಂದಾಗಿದ್ದಾರೆ. ಹೀಗಾದಲ್ಲಿ ಭಾರತೀಯ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗಿದೆ.ಭಾರತದಿಂದ ರಫ್ತಾಗುವ ಔಷಧಗಳ ಪ್ರಮಾಣದಲ್ಲಿ ಅಮೆರಿಕದ ಪಾಲು ಶೇ.31ರಷ್ಟಿದೆ. ಇದರ ಮೌಲ್ಯವು 2.73 ಬಿಲಿಯನ್‌ ಡಾಲರ್‌ (23478 ಕೋಟಿ ರು.) ನಷ್ಟಿದೆ.

 ಅಲ್ಲದೇ ಭಾರತದ ಅಗ್ರ ಔಷಧ ತಯಾರಕ ಸನ್‌ಫಾರ್ಮಾದ ಒಟ್ಟು ಆದಾಯದಲ್ಲಿ ಅಮೆರಿಕದ ಪಾಲು ಶೇ.32ರಷ್ಟಿದ್ದರೆ, ಸಿಪ್ಲಾ ಪಾಲು ಶೇ.30ರಷ್ಟಿದೆ. ಇನ್ನು ಡಾ। ರೆಡ್ಡೀಸ್‌ ಆದಾಯದಲ್ಲಿ ಉತ್ತರ ಅಮೆರಿಕದ ಪಾಲು ಶೇ.47ರಷ್ಟಿದೆ. ಒಂದು ವೇಳೆ ಔಷಧ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಬಿದ್ದರೆ, ಭಾರತೀಯ ಕಂಪನಿಗಳಿಗೆ ಹೊಡೆತ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.