ಸಾರಾಂಶ
ಹೈದರಾಬಾದ್: ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಿಸಿದ್ದ ಈನಾಡು ಮಾಧ್ಯಮ ಸಮೂಹದ ಮುಖ್ಯಸ್ಥ ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ತಾವು ನಿರ್ಮಿಸಿದ್ದ ರಾಮೋಜಿ ಫಿಲ್ಮ್ ಸಿಟಿಯಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಬೆಳಗ್ಗೆ ನೆರವೇರಿದೆ. ಆಂಧ್ರದ ನಿಯೋಜಿತ ಸಿಎಂ ಚಂದ್ರಬಾಬು ನಾಯ್ಡು ಸ್ವತಃ ಚಿತೆಗೆ ಹೆಗಲುಕೊಟ್ಟು ಅಗಲಿದ ಗಣ್ಯರ ಜೊತೆಗಿನ ತಮ್ಮ ಸಂಬಂಧವನ್ನು ತೆರೆದಿಟ್ಟರು.
ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ವಿಧಿವಿಧಾನಗಳು ಪೂರ್ಣವಾದ ಬಳಿಕ ಅಂತಿಮವಾಗಿ ರಾಮೋಜಿ ಅವರ ಪುತ್ರ ಕಿರಣ್ ಪ್ರಭಾಕರ್ ತಮ್ಮ ತಂದೆಯ ಚಿತೆಗೆ ಕೊಳ್ಳಿ ಇಟ್ಟರು. ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎನ್.ವಿ ರಮಣ , ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ತೆಲಂಗಾಣದ ಇಬ್ಬರು ಸಚಿವರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.
ಬಳಿಕ ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, ‘ರಾಮೋಜಿ ಅವರನ್ನು ಭೌತಿಕವಾಗಿ ಕಳೆದುಕೊಂಡಿದ್ದರೂ ಅವರು ಮಾರ್ಗದರ್ಶಿಯಂತೆ ನಮ್ಮಲ್ಲಿ ಸ್ಫೂರ್ತಿ ತುಂಬುತ್ತಾ ನಮ್ಮನ್ನು ಮುನ್ನಡೆಸಲಿದ್ದಾರೆ. ಅವರ ಕೆಲಸಗಳು ಸೂರ್ಯನ ಕಿರಣಗಳಂತೆ ಅಮರವಾಗಲಿವೆ’ ಎಂದು ತಿಳಿಸಿದ್ದು, ಅವರ ಗೌರವಾರ್ಥ ಆಂಧ್ರಪ್ರದೇಶ ಸರ್ಕಾರ 9 ಮತ್ತು 10ರಂದು ಶೋಕಾಚರಣೆಯನ್ನು ಘೋಷಿಸಿದೆ.
ರಾಮೋಜಿ ರಾವ್ ಅವರು ಶನಿವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದರು.