ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ ಪಾದಯಾತ್ರೆಗೆ 3ನೇ ಬಾರಿ ಶಂಭುಗಡಿಯಲ್ಲಿ ತಡೆ

| Published : Dec 15 2024, 02:04 AM IST / Updated: Dec 15 2024, 04:26 AM IST

ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ ಪಾದಯಾತ್ರೆಗೆ 3ನೇ ಬಾರಿ ಶಂಭುಗಡಿಯಲ್ಲಿ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌-ಹರ್ಯಾಣದ 101 ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪಾದಯಾತ್ರೆಯನ್ನು ಶನಿವಾರ ಶಂಭು ಗಡಿಯಲ್ಲಿ ಮೂರನೇ ಬಾರಿ ತಡೆಹಿಡಿಯಲಾಯಿತು.

ನವದೆಹಲಿ: ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌-ಹರ್ಯಾಣದ 101 ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪಾದಯಾತ್ರೆಯನ್ನು ಶನಿವಾರ ಶಂಭು ಗಡಿಯಲ್ಲಿ ಮೂರನೇ ಬಾರಿ ತಡೆಹಿಡಿಯಲಾಯಿತು.

ಈ ಸಂದರ್ಭದಲ್ಲಿ ರೈತರ ಮೇಲೆ ಪೊಲೀಸರು ಪ್ರಯೋಗಿಸಿದ ಅಶ್ರುವಾಯು ಮತ್ತು ಜಲಫಿರಂಗಿಯಿಂದಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಹೀಗಾಗಿ ಅನಿವಾರ್ಯವಾಗಿ ರೈತರು ತಮ್ಮ ಪಾದಯಾತ್ರೆಯನ್ನು ಮತ್ತೊಮ್ಮೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಡಿ.6 ಮತ್ತು ಡಿ.8ರಂದೂ ರೈತರ ಪಾದಯಾತ್ರೆಯನ್ನು ಶಂಭುಗಡಿಯಲ್ಲಿ ಇದೇ ರೀತಿ ತಡೆಹಿಡಿಯಲಾಗಿತ್ತು. ಇದೀಗ ದೆಹಲಿಗೆ ತೆರಳುವ ಅವರ ಮೂರನೇ ಪ್ರಯತ್ನವೂ ಪೊಲೀಸರಿಂದಾಗಿ ವಿಫಲವಾಯಿತು. ದೆಹಲಿ ಸರ್ಕಾರದ ಅನುಮತಿ ತೋರಿಸದೆ ಪಾದಯಾತ್ರೆಗೆ ಅವಕಾಶ ನೀಡಲ್ಲ ಎಂದು ಹರ್ಯಾಣ ಪೊಲೀಸರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕುಸ್ತಿಪಟು ಪುನಿಯಾ ಬೆಂಬಲ:

ಕುಸ್ತಿಪಟು, ಕಾಂಗ್ರೆಸ್‌ ನಾಯಕ ಬಜರಂಗ್‌ ಪುನಿಯಾ ಅವರು ಶಂಭುಗಡಿಗೆ ತೆರಳಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ‘ಒಂದು ಕಡೆ ಸರ್ಕಾರ ತಾನು ರೈತರನ್ನು ತಡೆಯುತ್ತಿಲ್ಲ ಎಂದು ಹೇಳಿದರೆ, ಮತ್ತೊಂದೆಡೆ ಅವರ ಮೇಲೆ ಅಶ್ರುವಾಯು ಮತ್ತಿತರ ಅಸ್ತ್ರ ಪ್ರಯೋಗಿಸುತ್ತಿದೆ. ಶಂಭುಗಡಿ ಪಾಕ್‌ ಗಡಿಯೇನೋ ಎಂಬಂತೆ ನಡೆದುಕೊಳ್ಳಲಾಗುತ್ತಿದೆ. ರಾಜಕೀಯ ನಾಯಕರೂ ಅನುಮತಿ ಪಡೆದೇ ದೆಹಲಿಗೆ ಪ್ರತಿಭಟನೆಗೆ ಹೋಗ್ತಾರಾ?’ ಎಂದು ಪುನಿಯಾ ತೀವ್ರ ಕಿಡಿಕಾರಿದರು.