ವಿವಿಧ ಬೇಡಿಕೆ ಈಡೇರಿಕೆಗೆ ದಿಲ್ಲಿ ಗಡೀಲಿ ಮತ್ತೆ ಭುಗಿಲೆದ್ದ ರೈತ ಹೋರಾಟ: ಅಶ್ರುವಾಯು ಸಿಡಿತ

| Published : Dec 09 2024, 12:47 AM IST / Updated: Dec 09 2024, 06:04 AM IST

ಸಾರಾಂಶ

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ ಮತ್ತು ಹರ್ಯಾಣ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಗೋಚರಿಸಿದೆ

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ ಮತ್ತು ಹರ್ಯಾಣ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಗೋಚರಿಸಿದೆ. ಶನಿವಾರ ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಹೋರಾಟವನ್ನು ರೈತರು ಭಾನುವಾರ ಪುನಾರಂಭ ಮಾಡಿದರಾದರೂ, ರೈತರ ದೆಹಲಿ ಚಲೋ ಪಾದಯಾತ್ರೆಯನ್ನು ಹರ್ಯಾಣದ ಶಂಭು ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಎಚ್ಚರಿಕೆಯ ಹೊರತಾಗಿಯೂ ಬ್ಯಾರಿಕೇಡ್‌ ದಾಟಿ ಶಂಭುಗಡಿ ದಾಟಲು ಮುಂದಾದವರ ಮೇಲೆ ಹರ್ಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದು, 10 ರೈತರು ಗಾಯಗೊಂಡಿದ್ದಾರೆ. ಹೀಗಾಗಿ ಇದೀಗ ಎರಡನೇ ಬಾರಿ ಒಂದು ದಿನದ ಮಟ್ಟಿಗೆ ಪಾದಯಾತ್ರೆಯನ್ನು ರೈತರು ರದ್ದು ಮಾಡಿದ್ದಾರೆ. ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುವುದಾಗಿ ಪಂಜಾಬ್ ರೈತ ಮುಖಂಡ ಸರ್ವಾನ್‌ ಸಿಂಗ್‌ ಹೇಳಿದ್ದಾರೆ.

ಮಾತುಕತೆ ಇಲ್ಲ:

ಶುಕ್ರವಾರವೇ ಈ ರೈತರನ್ನು ತಡೆ ಹಿಡಿಯಲಾಗಿತ್ತು. ಈ ವೇಳೆ ಅವರು, ಸರ್ಕಾರವು ಮಾತುಕತೆ ನಡೆಸಲು ಮುಂದಾದರೆ ಚಲೋ ನಿಲ್ಲಿಸುವುದಾಗಿ ಹೇಳಿದ್ದರು. ಆದರೆ ಸರ್ಕಾರ ಮಾತುಕತೆಗೆ ಮುಂದಾಗದ ಕಾರಣ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಿಸಲು ಮುಂದಾದರು. ಆಗ ರೈತರನ್ನು ಶಂಭು ಗಡಿಯಲ್ಲೇ ತಡೆಹಿಡಿಯಲಾಯಿತು.

‘ದೆಹಲಿ ಆಡಳಿತದ ಅನುಮತಿ ತೋರಿಸದೆ ಯಾರನ್ನೂ ಗಡಿದಾಟಲು ಬಿಡಲ್ಲ ಮತ್ತು ನಮ್ಮ ಬಳಿ ಇರುವ ಪ್ರತಿಭಟನಾಕಾರರ ಪಟ್ಟಿಗೂ ಇಲ್ಲಿ ಸೇರಿರುವವರಿಗೂ ಸಾಕಷ್ಟು ವ್ಯತ್ಯಾಸಗಳಿವೆ’ ಎಂದರು. ಆಗ ಘರ್ಷಣೆ ಸಂಭವಿಸಿದೆ.

ಮೊದಲು ಅಶ್ರುವಾಯು, ನಂತರ ಹೂಮಳೆ!

ಈ ನಡುವೆ ಅಶ್ರುವಾಯು ಪ್ರಯೋಗದ ಬಳಿಕ, ರೈತರ ಮನವೊಲಿಸಲು ಪೊಲೀಸರು ಹೂಮಳೆ ಸುರಿಸಿದರು ಹಾಗೂ ಚಹಾ-ಬಿಸ್ಕತ್ತು ನೀಡಿ ಗಾಂಧಿಗಿರಿ ಯತ್ನವನ್ನೂ ನಡೆಸಿದರು.