ದೋಷಯುಕ್ತ ಹೆದ್ದಾರಿಯಿಂದ ಅಪಘಾತವಾದ್ರೆ ಕಂಟ್ರಾಕ್ಟರ್‌, ಎಂಜಿನಿಯರ್‌ ಹೊಣೆ : ಗಡ್ಕರಿ

| Published : Jan 17 2025, 12:46 AM IST / Updated: Jan 17 2025, 04:49 AM IST

ಸಾರಾಂಶ

‘ದೋಷಮಯ ಹೆದ್ದಾರಿ ನಿರ್ಮಾಣವು ಜಾಮೀನು ರಹಿತ ಅಪರಾಧವಾಗಬೇಕು ಮತ್ತು ಅದರಿಂದಾಗುವ ಅಪಘಾತಗಳಿಗೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳೇ ಹೊಣೆ ಮಾಡಿ ಜೈಲಿನಲ್ಲಿ ಹಾಕಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನವದೆಹಲಿ: ‘ದೋಷಮಯ ಹೆದ್ದಾರಿ ನಿರ್ಮಾಣವು ಜಾಮೀನು ರಹಿತ ಅಪರಾಧವಾಗಬೇಕು ಮತ್ತು ಅದರಿಂದಾಗುವ ಅಪಘಾತಗಳಿಗೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳೇ ಹೊಣೆ ಮಾಡಿ ಜೈಲಿನಲ್ಲಿ ಹಾಕಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ,‘ ರಸ್ತೆ ಅಪಘಾತದಲ್ಲಿ ಭಾರತವು ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಹೆದ್ದಾರಿ ನಿರ್ಮಾಣದಲ್ಲಿ ದೋಷಗಳು. ಇದರಿಂದ ಅಪಘಾತಗಳು ಹೆಚ್ಚಾಗುತ್ತದೆ. ಹೀಗಾಗಿ ಇದನ್ನು ಜಾಮೀನು ರಹಿತ ಅಪರಾಧವನ್ನಾಗಿ ಘೋಷಿಸಿ, ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳನ್ನು ಅಪಘಾತಕ್ಕೆ ಹೊಣೆ ಮಾಡಿ ಜೈಲಿಗೆ ಹಾಕಬೇಕು’ ಎಂದು ಹೇಳಿದರು. 2023ರಲ್ಲಿ ಭಾರತದಲ್ಲಿ 1.72 ಲಕ್ಷ ಜನರು ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ.

ಪೂಜಾ ಸ್ಥಳಗಳ ಕಾಯ್ದೆ ರದ್ದು ಕೋರಿಕೆ ವಿರುದ್ಧ ಕಾಂಗ್ರೆಸ್‌ ಸುಪ್ರೀಂಗೆ

ನವದೆಹಲಿ: ಸ್ವಾತಂತ್ರ್ಯಾಪೂರ್ವ ಇದ್ದ ಪೂಜಾ ಸ್ಥಳಗಳಲ್ಲಿ ಯಾವುದೇ ಬದಲಾವಣೆ ಮಾಡದೆ, ಅವುಗಳನ್ನು ಹಾಗೇ ಕಾಪಾಡಿಕೊಳ್ಳುವ ಪೂಜಾ ಸ್ಥಳಗಳ ಕಾಯ್ದೆ, 1991ರ ನಿಬಂಧನೆಗಳನ್ನು ಪ್ರಶ್ನಿಸಿ ಬಿಜೆಪಿ ನಾಯಕರು ಸಲ್ಲಿಸಿರುವ ಅರ್ಜಿ ವಿರೋಧಿಸಿ ಕಾಂಗ್ರೆಸ್ ಗುರುವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿರೋಧಿ ಕಾಂಗ್ರೆಸ್‌ ಕೂಡ ಅರ್ಜಿ ಸಲ್ಲಿಸಿದ್ದು, ‘ಭಾರತದ ಸಮಾಜದಲ್ಲಿ ಜಾತ್ಯತೀತತೆಯನ್ನು ಕಾಪಾಡಲು ಈ ಕಾಯ್ದೆ ಅಗತ್ಯ. ಅದರಲ್ಲಿನ ಬದಲಾವಣೆಗಳು ರಾಷ್ಟ್ರದ ಕೋಮು ಸೌಹಾರ್ದತೆಯನ್ನು ಕದಡುತ್ತದೆ’ ಎಂದು ಹೇಳಿದೆ. ಈ ಹಿಂದೆ ಎಂಐಎಂ ಪಕ್ಷ ಕೂಡ ಕಾಯ್ದೆಯ ಜಾರಿ ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು.