ಸಾರಾಂಶ
₹12 ಲಕ್ಷವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ 1 ಕೋಟಿಗೂ ಹೆಚ್ಚು ಜನರು ಆದಾಯ ತೆರಿಗೆ ಕಟ್ಟುವುದರಿಂದ ಮುಕ್ತರಾಗಲಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ : ₹12 ಲಕ್ಷವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ 1 ಕೋಟಿಗೂ ಹೆಚ್ಚು ಜನರು ಆದಾಯ ತೆರಿಗೆ ಕಟ್ಟುವುದರಿಂದ ಮುಕ್ತರಾಗಲಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ವರೆಗೆ ₹7 ಲಕ್ಷ ಆದಾಯ ಹೊಂದಿರುವ ಜನರಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ತೆರಿಗೆ ವಿನಾಯಿತಿಯನ್ನು ₹12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು 1 ಕೋಟಿ ನೇರ ತೆರಿಗೆ ಕಟ್ಟುವ ಜನರಿಗೆ ಅನುಕೂಲ ಆಗಲಿದೆ. ಅವರು ಇನ್ನು ಮುಂದೆ ತೆರಿಗೆ ಕಟ್ಟಬೇಕಿಲ್ಲ ಎಂದು ಬಜೆಟ್ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸರ್ಕಾರವು ಜನರ ಕೈಯಲ್ಲಿ ಹೆಚ್ಚು ಹಣ ಉಳಿಸಲಿದೆ. ಸರ್ಕಾರವು ಜನರ ಬೇಡಿಕೆಗೆ ಸ್ಪಂದಿಸಿದೆ ಎಂದು ತಿಳಿಸಿದರು.
ಹೊಸ ನಿಯಮ 2025-26ರ ಆರ್ಥಿಕ ವರ್ಷದಲ್ಲಿ ಜನರಿಗೆ ಅನ್ವಯಿಸಲಿದೆ. ₹12 ಲಕ್ಷದವರೆಗಿನ ಆದಾಯ ಹೊಂದಿರುವ ತೆರಿಗೆ ಪಾವತಿದಾರರು ಸಲ್ಲಿಸುವ ಐಟಿ ರಿಟರ್ನ್ಸ್‌ನಲ್ಲಿ ತೆರಿಗೆ ಮುಕ್ತ ಸೌಲಭ್ಯಕ್ಕೆ ಅರ್ಹರಾಗಲಿದ್ದಾರೆ. ಆದರೆ ₹12 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ ಆಗ ₹4 ಲಕ್ಷದವರೆಗೆ ತೆರಿಗೆ ಇಲ್ಲ, ಬಳಿಕ 4ರಿಂದ 8 ಲಕ್ಷಕ್ಕೆ ಶೇ.5 ತೆರಿಗೆ, 8ರಿಂದ 12 ಲಕ್ಷಕ್ಕೆ ಶೇ.10, 12ರಿಂದ 16 ಲಕ್ಷಕ್ಕೆ ₹15 ಲಕ್ಷ, 16ರಿಂದ 20 ಲಕ್ಷಕ್ಕೆ ಶೇ.20, 20ರಿಂದ 24 ಲಕ್ಷಕ್ಕೆ ಶೇ. 25, 24 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ.30 ತೆರಿಗೆ ವಿಧಿಸಲಾಗುತ್ತದೆ.
ನಾವು ಮಧ್ಯಮ ವರ್ಗದ ಜನರ ಅನುಕೂಲಕ್ಕೆ ತೆರಿಗೆಯನ್ನು ಕಡಿತ ಮಾಡಿದ್ದೇವೆ ಎಂದು ವಿತ್ತ ಸಚಿವೆ ಹೇಳಿದರು.